ಕಾರವಾರ: ರಾಜ್ಯ ಹೆದ್ದಾರಿಯಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ಗುಡ್ಡವನ್ನು ಲೋಕೋಪಯೋಗಿ ಇಲಾಖೆ ಇನ್ನೂ ತೆರವು ಮಾಡದೇ ಇರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಕಡವಾಡ ಗ್ರಾಪಂ ವ್ಯಾಪ್ತಿಯ ಮಂದ್ರಾಳಿ ಸಮೀಪ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಸುಮಾರು 500 ಮೀಟರ್ ಗುಡ್ಡ ಕುಸಿದಿತ್ತು. ರಸ್ತೆಯ ಚರಂಡಿ ಹಾಗೂ ಕಲ್ವರ್ಟ್ ಮುಚ್ಚಿದ್ದರಿಂದ ನೀರು ರಸ್ತೆಯಲ್ಲಿ ಹರಿದು ಪಕ್ಕದ ಮನೆಗಳಿಗೆ ನುಗ್ಗಿತ್ತು.
ಘಟನೆ ನಡೆದು 9 ತಿಂಗಳು ಕಳೆದಿದೆ. ಮತ್ತೆ ಮಳೆಗಾಲ ಬಂದಿದೆ. ರಸ್ತೆಯ ನಿರ್ವಹಣೆ ಜವಾಬ್ದಾರಿ ಹೊತ್ತ ಪಿಡಬ್ಲ್ಯುಡಿ ಅಧಿಕಾರಿಗಳು ಮಾತ್ರ ಇತ್ತ ಬಂದಿಲ್ಲ. ರಿಪೇರಿ ಮಾಡಿಲ್ಲ. ಇದರಿಂದ ಈ ಮಳೆಗಾಲದಲ್ಲಿ ಗುಡ್ಡ ಇನ್ನಷ್ಟು ಕುಸಿದು ರಸ್ತೆಯಲ್ಲಿ ವಾಹನ ಸಂಚಾರ ಬಂದಾಗುವ, ಗುಡ್ಡದಿಂದ ಬರುವ ನೀರು ಮನೆಗಳಿಗೆ ನುಗ್ಗುವ ಆತಂಕ ಜನರದ್ದಾಗಿದೆ.
ರಸ್ತೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಾಣ ಮಾಡಿಕೊಡುವಂತೆ ಶಾಸಕರಲ್ಲಿ ವಿನಂತಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಪ್ರಾರಂಭವಾದಲ್ಲಿ ಮಣ್ಣು ಒದ್ದೆಯಾಗಿ ಇನ್ನಷ್ಟು ಗುಡ್ಡ ಕುಸಿಯಬಹುದು. ಕಾಮಗಾರಿಗೂ ತೊಂದರೆ ಉಂಟಾಗಬಹುದು. ಇದರಿಂದ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ವಾರದ ಹಿಂದೆಯೇ ಮನವಿ ಮಾಡಿದ್ದೆ. ಆದರೆ, ಇನ್ನೂ ಕೆಲಸ ಪ್ರಾರಂಭಿಸಿಲ್ಲ. ಶೀಘ್ರ ಕಾಮಗಾರಿ ಮಾಡಬೇಕು. | ಸುಭಾಷ ಗುನಗಿ, ಸ್ಥಳೀಯ
ಸಂಬಂಧಪಟ್ಟ ವಿಭಾಗದ ಅಧಿಕಾರಿಗೆ ತಿಳಿಸಿದ್ದು, ಇದೇ ವಾರದಲ್ಲಿ ಜೆಸಿಬಿ, ಟಿಪ್ಪರ್ ಕೊಂಡೊಯ್ದು ಮಣ್ಣು ತೆಗೆಯಲಾಗುವುದು. | ರಾಜು ನಾಯ್ಕ, ಎಇಇ, ಪಿಡಬ್ಲ್ಯುಡಿ, ಕಾರವಾರ