ಕಾರವಾರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63 ಹಾಗೂ 206ರಲ್ಲಿ ಗುಡ್ಡ ಕುಸಿತ ತಡೆಗೆ ವಿಭಿನ್ನ ರೀತಿಯಲ್ಲಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಾಗಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಕರ್ನಾಟಕ ಕ್ವಾಯರ್ ಕೋ-ಆಪ್ ಫೇಡರೇಷನ್ ಸಹಯೋಗದಲ್ಲಿ ಗಿಡ ಬೆಳೆಸಿ ಗುಡ್ಡ ಕುಸಿತ ತಡೆಯುವ ಯೋಜನೆಯ ಪ್ರಸ್ತಾವವನ್ನು ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದೆ.
ಹೊನ್ನಾವರ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುಂಡಬಾಳ ಸಮೀಪ ಹಾಗೂ ಬಾಳೆಗುಳಿ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅರಬೈಲ್ ಸಮೀಪ ಹಾಗೂ 2019ರಲ್ಲಿ ಭಾರಿ ಮಳೆಯಿಂದ ಧರೆ ಕುಸಿಯಿತು. ಇದರಿಂದ ಹೆದ್ದಾರಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಇಲ್ಲಿನ ಮಣ್ಣಿನ ಲಕ್ಷಣ ವಿಭಿನ್ನವಾಗಿದೆ. ಮಳೆ ಬಂದ ತಕ್ಷಣ ಮಣ್ಣು ನೀರಿನೊಟ್ಟಿಗೆ ಕರಗಿ ಹೋಗುತ್ತದೆ. ಇದರಿಂದ ಆಗಾಗ ಗುಡ್ಡ ಕುಸಿಯುತ್ತಲೇ ಇರುತ್ತದೆ ಎಂಬುದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳು ಅಭಿಪ್ರಾಯಪಟ್ಟರು.
ಎರಡೂ ಕಡೆ ಗುಡ್ಡದಲ್ಲಿ ಮರಳು ಚೀಲಗಳನ್ನು ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಇಲ್ಲಿನ ಮಣ್ಣಿನ ವಿಭಿನ್ನ ಲಕ್ಷಣದಿಂದಾಗಿ, ತಡೆಗೋಡೆ ನಿರ್ವಣದಿಂದ ಗುಡ್ಡ ಕುಸಿತ ನಿಲ್ಲುವಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕ್ವಾಯಿರ್ ಕೋ- ಆಪ್ ಫೆಡರೇಷನ್ನ ತಜ್ಞರೊಟ್ಟಿಗೆ ಮಾತುಕತೆ ನಡೆಸಲಾಗಿದೆ. ಅವರು ಒಮ್ಮೆ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 63ಕ್ಕೆ ಸಂಬಂಧಿಸಿದಂತೆ 3.26 ಕೋಟಿ ರೂ. ಹಾಗೂ ರಾಷ್ಟ್ರೀಯ ಹೆದ್ದಾರಿ 206 ಕುರಿತಂತೆ 2.2 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುಮೋದನೆಗಾಗಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮೊದಲು ಗುಡ್ಡ ಕುಸಿಯುವ ಜಾಗದಲ್ಲಿ ತೆಂಗಿನ ನಾರಿನ ಮ್ಯಾಟ್ ಹಾಕಿ, ನಂತರ ಅದರ ಮೇಲೆ ಬೇರಿನ ಜಾಲ ವಿಸ್ತಾರವಾಗಿ ಹರಡುವ ಸಸ್ಯಗಳನ್ನು ಬೆಳೆಸಿ ತಡೆಗೋಡೆ ನಿರ್ಮಾಣ ಮಾಡಲು ಉದ್ದೇಶಿಸಿದ್ದಾರೆ. ಕ್ರಿಯಾ ಯೋಜನೆಗೆ ಅನುಮೋದನೆ ದೊರೆತ ಬಳಿಕ ಕಾಮಗಾರಿ ಪ್ರಾರಂಭಿಸಲಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎ.ಎಚ್. ಬಡಿಗೇರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ವಿಜಯವಾಣಿ ವರದಿ
2019ರಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುಡ್ಡ ಕುಸಿತ ಉಂಟಾಗಿ ವರ್ಷ ಕಳೆದರೂ ಅಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳದ ಬಗ್ಗೆ ಗುಂಡಬಾಳದ ರಾಜೇಶ ಶೇಟ್ ಎಂಬುವವರು ರಸ್ತೆಯ ಜಾಗ ಮಾರಾಟಕ್ಕೆ ಇದೆ ಎಂದು ಫಲಕ ಅಳವಡಿಸಿ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಕುರಿತು ‘ವಿಜಯವಾಣಿ’ಯು ನ. 9ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುಂಡಬಾಳ ಸಮೀಪ ಗುಡ್ಡ ಕುಸಿದ ಜಾಗದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲಿ ಸಾಮಾನ್ಯ ತಡೆಗೋಡೆ ನಿರ್ಮಾಣ ಮಾಡಿದರೂ ಪ್ರಯೋಜನವಿಲ್ಲ. ಇದರಿಂದ ವಿಭಿನ್ನ ರೀತಿಯ ಪ್ರಯತ್ನ ನಡೆಸಿದ್ದೇವೆ. ನಮ್ಮ ಇಲಾಖೆಯ ಮುಖ್ಯ ಇಂಜಿನಿಯರ್ಗೂ ಈ ಬಗ್ಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. | ಎ.ಎಚ್.ಬಡಿಗೇರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ ವಿಭಾಗದ ಇಇ