ರೋಣ: ಕರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ವಿಧಿಸಿರುವುದರಿಂದ ದಿನ ನಿತ್ಯದ ಕೂಲಿಯನ್ನೇ ನೆಚ್ಚಿಕೊಂಡಿದ್ದ ಗುಡಿಸಲುವಾಸಿ, ಕೂಲಿ ಕಾರ್ವಿುಕರಲ್ಲಿ ಪರದಾಟ ಶುರುವಾಗಿದೆ.
ಪಟ್ಟಣದ ಪ್ರವಾಸಿ ಮಂದಿರದ ಹಿಂದೆ, ಕಲ್ಯಾಣ ನಗರ, ವೇರ್ಹೌಸ್, ಜನತಾಪ್ಲಾಟ್ ಸೇರಿ ವಿವಿಧೆಡೆ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿರುವ ಜನರು ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಮನೆಗಳಿಂದ ಹೊರಗೆ ಬರಲು ಅವಕಾಶಗಳಿಲ್ಲದ ಕಾರಣ ಉಪ್ಪು, ಮೆಣಸಿನಕಾಯಿಗೂ ಪರದಾಡುವಂತಾಗಿದೆ.
ಜಾತ್ರೆಯಲ್ಲಿ ಆಟಿಗೆ ಸಾಮಾನುಗಳನ್ನು ಮಾರಾಟ ಮಾಡುವ ಪಟ್ಟಣದ ಕಲ್ಯಾಣ ನಗರದ ಗುಡಿಸಲುವಾಸಿಗಳಾದ ಚೆನ್ನದಾಸರು ಹಾಗೂ ಬಸ್ ನಿಲ್ದಾಣದ ಮುಂದೆ ಹೂ ಮಾರುವವರು, ತಳ್ಳುವ ಗಾಡಿಯಲ್ಲಿ ಹಣ್ಣು ಮಾರುವವರು ತಮ್ಮ ಸರಕು ಸರಂಜಾಮು ಕೊಳ್ಳಲು ಮೈಕ್ರೋ ಫೈನಾನ್ಸ್ಗಳಿಂದ ಹಣ ಪಡೆದಿದ್ದು, ಅದನ್ನು ಕಟ್ಟಲು ಹೆಣಗಾಡುತ್ತಿದ್ದಾರೆ. ವಾರದ ಕಂತಿನ ಲೆಕ್ಕದಲ್ಲಿ ಹಣ ನೀಡಿರುವ ಫೈನಾನ್ಸ್ ಕಂಪನಿಗಳು ಮುಲಾಜಿಲ್ಲದೆ ಹಣ ವಸೂಲಿಗೆ ಮುಂದಾಗಿವೆ. ಒಂದು ದಿನ ತಡವಾದರೂ ದಂಡ ಸಹಿತ ಹಣ ವಸೂಲಿ ಮಾಡುತ್ತಿದ್ದಾರೆ. ಈ ನಡುವೆ ಸ್ಥಳೀಯ ಬಡ್ಡಿ ವ್ಯವಹಾರ ಮಾಡುವ ಲೇವಾದೇವಿಗಾರರು ಸಾಲ ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ.
ಗುಡಿಸಲಿನಲ್ಲಿ ವಾಸಿಸುತ್ತಿರುವ ವಯೋವೃದ್ಧರು, ಮಕ್ಕಳು ಹಸಿವಿನಿಂದ ಬಳಲುತ್ತಿದ್ದು, ಯಾರಾದರೂ ದಾನಿಗಳು ಹಾಗೂ ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು, ತಾಲೂಕಾಡಳಿತದವರು ಇತ್ತ ಗಮನ ಹರಿಸಬೇಕಿದೆ.
ಪಟ್ಟಣದ ಪ್ರವಾಸಿ ಮಂದಿರದ ಹಿಂದುಗಡೆ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಗುಡಿಸಲುಗಳನ್ನು ಹಾಕಿಕೊಂಡು ಎಲ್ಲರೂ ಕೂಲಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದೇವೆ. ಮನೆ ಮನೆ ಕಸ ಮುಸುರಿ, ಹೋಟೆಲ್ ಸ್ವಚ್ಛತೆ, ಕಟ್ಟಡ ನಿರ್ವಣ, ಬಸ್ ನಿಲ್ದಾಣದ ಮುಂದೆ ಹೂ ಮಾರುವುದು ಸೇರಿ ಇತರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರು, ಮಕ್ಕಳನ್ನು ಕಟ್ಟಿಕೊಂಡು ಬದುಕುವುದೇ ದುಸ್ತರವಾಗಿದೆ. | ಪದ್ಮಾ ಸಾಳುಂಕೆ, ಜಯಮ್ಮ ಚೌಧರಿ, ಬಾಳವ್ವ ಗೊನ್ನಾಗರ, ಮಾಬೂಭೀ ಮುಜಾವರ, ಗುಡಿಸಲುವಾಸಿಗಳು
EndFragment