ಹುಕ್ಕೇರಿ: ತಾಲೂಕಿನ ಗುಡಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ೧.೫೨ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಹೇಳಿದರು.
ತಾಲೂಕಿನ ಗುಡಸ ಪಿಕೆಪಿಎಸ್ ಸಂಘದ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಂಸದ ರಮೇಶ ಕತ್ತಿ ಹಾಗೂ ಶಾಸಕ ನಿಖಿಲ ಕತ್ತಿ ಮಾರ್ಗದರ್ಶನದಲ್ಲಿ ಸಂಘದ ಎಲ್ಲ ವಿಭಾಗಗಳಲ್ಲಿ ಗಣಕೀಕೃತ, ಬ್ಯಾಂಕಿಂಗ್ ವ್ಯವಸ್ಥೆ, ಅಪಘಾತ ವಿಮೆ ಸೌಲಭ್ಯ ಸೇರಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ೨,೮೦೯ ಸದಸ್ಯರನ್ನು ಹೊಂದಿದ ಸಹಕಾರಿಯಲ್ಲಿ ೧.೭೦ ಕೋಟಿ ರೂ. ಷೇರು ಬಂಡವಾಳ, ೬೫.೬೫ ಕೋಟಿ ರೂ. ದುಡಿಯುವ ಬಂಡವಾಳ, ೩೮.೯೭ ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಬೆಳೆ ಸಾಲ, ಟ್ರಾಕ್ಟಾರ್ ಸಾಲ ಮತ್ತು ಕೃಷಿಯೇತರ ಸಾಲ ಸೇರಿ ಒಟ್ಟು ೪೪.೯೪ ಕೋಟಿ ರೂ. ಸಾಲ ವಿತರಿಸಿದ್ದು, ಶೇ.೧೦೦ರಷ್ಟು ಸಾಲ ವಸೂಲಿ ಮಾಡುವ ಮೂಲಕ ೧.೫೨ ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಉಪಾಧ್ಯಕ್ಷ ರಾಯಪ್ಪ ಡೂಗ, ನಿರ್ದೇಶಕರಾದ ಸದಾನಂದ ಹಿರೇಮಠ, ಶಿದಗೌಡ ಪಾಟೀಲ, ಬಾಬು ಜಾರಕಿಹೊಳಿ, ಅಲಗೌಡ ದೊಡದನ್ನವರ, ಅಡಿವೆಪ್ಪ ಮಗದುಮ್ಮ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ, ಬ್ಯಾಂಕ್ ನಿರೀಕ್ಷಕ ಕೆ.ಎಸ್.ಗವಿಮಠ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಮಲ್ಲಾಪೂರೆ ಸ್ವಾಗತಿಸಿದರು. ಬಸವರಾಜ ಪಾಟೀಲ ನಿರೂಪಿಸಿದರು. ಶಿವಾನಂದ ಕುಂಬಾರ ವಂದಿಸಿದರು.