ಶಿವಪ್ಪ ಹಿತ್ಲರ್ ಸೊರಬ
ಸೊರಬ: ಮಲೆನಾಡಿನ ಮಡಿಲಿನಲ್ಲಿರುವ ಗುಡವಿ ಪಕ್ಷಿಧಾಮ ಕರ್ನಾಟದ ಪ್ರಸಿದ್ಧ ಪಕ್ಷಿಧಾಮಗಳಲ್ಲೊಂದು. ಮಲ್ಲಿಗೆ ಹೂವು ಚೆಲ್ಲಿದಂತೆ, ಶ್ವೇತವರ್ಣದ ಪಕ್ಷಿಗಳ ಹಾರಾಟ ಮತ್ತು ಕಲರವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಜೂನ್ ಮೊದಲ ವಾರದಿಂದ ವಲಸೆ ಬಂದು ನವೆಂಬರ್ ಎರಡನೇ ವಾರದ ವೇಳೆಗೆ ಸಂತಾನೋತ್ಪತ್ತಿ ಕಾರ್ಯ ಮುಗಿಸಿ ಚಳಿಗಾಲ ಆರಂಭವಾಗುತ್ತಿದ್ದಂತೆ ಪರಿವಾರದೊಂದಿಗೆ ಮತ್ತೆ ಬೇರೆಡೆಗೆ ಪಕ್ಷಿಗಳು ವಲಸೆ ಹೋಗುತ್ತವೆ.
ಈ ಭಾರಿ ಮಳೆ ಬೇಗನೆ ಆರಂಭವಾಗಿದ್ದರಿಂದ ಪಕ್ಷಿಗಳು ಮೇ ಮೂರನೇ ವಾರದಲ್ಲಿಯೇ ಗುಡವಿಗೆ ಬಂದಿಳಿದಿದ್ದವು. ಸಂತಾನೋತ್ಪತ್ತಿ ಮುಗಿದು ಈಗಾಗಲೇ ಮರಿಗಳು ಹಾರಾಡಲು ಆರಂಭಿಸಿವೆ. ನಿರಂತರ ಮಳೆಯಿಂದ ಕೆರೆಗಳು ತುಂಬಿದ್ದರಿಂದ ಸಂತಾನೋತ್ಪತ್ತಿಗೆ ಉತ್ತಮ ಪರಿಸರ, ಆಹಾರ ದೊರತ ಪರಿಣಾಮ ಮರಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಸಂತಾನೋತ್ಪತ್ತಿ ಬೇಗನೆ ಮುಗಿದಿರುವುದರಿಂದ ಈ ಬಾರಿ ನವೆಂಬರ್‌ನೊಳಗೆ ಹಾರಿಹೋಗುವ ಸಾಧ್ಯತೆಗಳಿವೆ.
ಒಣಮರದ ತುತ್ತತುದಿಯ ಮೇಲೆ, ಪೊದೆಗಳ ಮೇಲೆ ಕುಳಿತ ಬಾನಾಡಿಗಳನ್ನು ದೂರದಿಂದ ನೋಡಿದರೆ ಹಿಮಪಾತ ಆಗಿರುವಂತೆ ಭಾಸವಾಗುತ್ತದೆ. ಇದೇ ಕಾರಣಕ್ಕೆ ಗುಡವಿ ಪಕ್ಷಿಧಾಮ ಇದೀಗ ಕಂಗೊಳಿಸುತ್ತಿದೆ. ಈ ದೃಶ್ಯ ಕಣ್ಣಿಗೆ ಆನಂದ ನೀಡಿದರೆ ಪಕ್ಷಿಗಳು ಆತ್ತಿಂದ ಇತ್ತ ಹಾರಾಡುತ್ತ ಉಂಟುಮಾಡುವ ಕಲರವ ಕಿವಿಗಳಿಗೆ ಮತ್ತು ಮನಸಿಗೆ ಮುದ ನೀಡುತ್ತದೆ.
ಈ ವರ್ಷ ಪಕ್ಷಿಗಳು ಕಳೆದ ಬಾರಿಗಿಂತ ಅಕ ಸಂಖ್ಯೆಯಲ್ಲಿ ಸಂತಾನೋತ್ಪತ್ತಿಗೆ ಆಗಮಿಸಿವೆ. 25ರಿಂದ 30 ಸಾವಿರ ಪಕ್ಷಿಗಳು ಹಾರಿ ಬಂದಿದ್ದು, ಈಗ ಮರಿಗಳು ಸೇರಿ ಪಕ್ಷಿಧಾಮದಲ್ಲಿ 50 ಸಾವಿರಕ್ಕೂ ಹೆಚ್ಚು ಬಾನಾಡಿಗಳು ಕಣ್ಮನ ಸೆಳೆಯುತ್ತಿವೆ.
ಈ ಸಮಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಪಕ್ಷಿಧಾಮಕ್ಕೆ ದೂರದ ದೇಶಗಳಾದ ಸೈಬೀರಿಯಾದ ಕರಿತಲೆ ಕೊಕ್ಕರೆ ಹಾಗೂ ಆಸ್ಟ್ರೇಲಿಯಾ ತೂತುಬಿಲ್ಲೆ ಬೊಕಾಸ್ ಪಕ್ಷಿಗಳು ಗುಡವಿ ಪಕ್ಷಿಧಾಮಕ್ಕೆ ಬರುವ ಮೂಲಕ ವಿದೇಶದೊಂದಿಗೆ ಕನ್ನಡ ನೆಲದ ನಂಟನ್ನು ಬೆಸೆದಿವೆ. ಆಸ್ಟ್ರೇಲಿಯಾ ತೂತುಬಿಲ್ಲೆ ಬೊಕಾಸ್ ಪಕ್ಷಿಗಳು ಈ ಬಾರಿ 50ಕ್ಕೂ ಹೆಚ್ಚು ಬಂದಿರುವುದು ವಿಶೇಷ.
ಹಲವು ಜಾತಿಯ ಪಕ್ಷಿ ಸಂಕುಲ
ಪಕ್ಷಿಧಾಮದಲ್ಲಿ ಬಿಳಿಕೊಕ್ಕರೆ, ಹಾವು ಹಕ್ಕಿ, ನೀರುಕಾಗೆ, ಬೂದುಬುಕ್ಕ, ರಾತ್ರಿಬುಕ್ಕ, ಪಾಂಡ್ ಹೇರಿ, 12 ಪ್ರಭೇದದ ನೀರುಕೋಳಿ, ಕರಿತಲೆ ಕೋಳಿ, ತುಪ್ಪಡ ಹಕ್ಕಿ, ನಕ್ಟಾ, ಲಿಟಲ್ ಗ್ರೇಬ್, ಪಿಂಟಲ್, ಕಾಮನ್ ಟೇಲ್, ಆಸ್ಟ್ರೀಚರ್, ಇಂಡಿಯನ್ ಮಾರ್ಟಿನ್, ಪರ್ಪಲ್ ಮಾರ್ಟಿನ್, ಕೂಟ್, ಉದ್ದಬಾಲದ ಹಕ್ಕಿ, ಬ್ರೌಂಜ್ ವಿಂಗಡ್ ಜಕಾನ್ ಹೀಗೆ 23ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ. ಸಂಜೆಯಾದ ಬಳಿಕ ತಾಯಿ ಹಕ್ಕಿ ತನ್ನ ಮರಿಗಳಿಗೆ ಆಹಾರ ಉಣಿಸುವ ಆಕರ್ಷಕ ದೃಶ್ಯಗಳು ಬೆರಗು ಮೂಡಿಸುತ್ತದೆ. ಇಂತಹ ರಮಣೀಯ ಪಕ್ಷಿಧಾಮ ರಾಜ್ಯದಲ್ಲಿ ಪ್ರಖ್ಯಾತಿ ಗಳಿಸಿದ್ದರೂ ಮತ್ತಷ್ಟು ಮೂಲ ಸೌಕರ್ಯ ಒದಗಿಸಬೇಕಿದೆ.
100 ಎಕರೆಯಲ್ಲಿದೆ ಪಕ್ಷಿಧಾಮ
ಸೊರಬ ಪಟ್ಟಣದಿಂದ 13 ಕಿ.ಮೀ ದೂರದಲ್ಲಿರುವ ಗುಡವಿ ಪಕ್ಷಿಧಾಮವನ್ನು 1986ರಲ್ಲಿ ಗುರುತಿಸಲಾಯಿತು. 183 ಎಕರೆ ಅರಣ್ಯ ಭೂಮಿ ಇದೆ. ಇದರಲ್ಲಿ 83 ಎಕರೆ ವಿಶಾಲ ಕೆರೆಯನ್ನು ಒಳಗೊಂಡಂತೆ 100 ಎಕರೆಯ ಈ ಪಕ್ಷಿಧಾಮ ಇತರೆ ಪಕ್ಷಿಧಾಮಗಳಿಗೆ ಹೋಲಿಸಿದರೆ ಕಡಿಮೆಯೇನೂ ಇಲ್ಲ. ಆದರೆ ಕೆಲವು ಮೂಲ ಸೌಕರ್ಯಗಳ ಕೊರತೆ ಇದೆ. ಇನ್ನೂ ಆಗಬೇಕಾದ ಕೆಲಸಗಳು ನನೆಗುದಿಗೆ ಬಿದ್ದಿವೆ. ಕ್ಯಾಂಟೀನ್ ವ್ಯವಸ್ಥೆ ಇದ್ದರೂ ಅದಿನ್ನೂ ಆರಂಭವಾಗಿಲ್ಲ. ವಸತಿ ಗೃಹಗಳು ಸಮರ್ಪಕವಾಗಿಲ್ಲ. ಬೋಟಿಂಗ್ ವ್ಯವಸ್ಥೆ ಇಲ್ಲ.
ಸೌಲಭ್ಯದ ಕೊರತೆ
ದ್ವಾರಬಾಗಿಲಿನಿಂದ ಪಕ್ಷಿಧಾಮದ ರಸ್ತೆವರೆಗೂ ರಸ್ತೆ ಹಾಳಾಗಿದೆ. ಡಾಂಬರೀಕರಣ ಮಾಡಬೇಕಿದೆ. ಪಕ್ಷಿಧಾಮದ ನಿರ್ವಹಣೆಗೆ ಹಾಗೂ ಸಿಬ್ಬಂದಿ ನೇಮಕ ಆಗಬೇಕು. ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಕೂಡಿರುವ ಪಕ್ಷಿಧಾಮಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸುವ ಮೂಲಕ ರಾಜ್ಯದಲ್ಲಿಯೇ ಸುಸಜ್ಜಿತ ಪಕ್ಷಿಧಾಮ ಮಾಡಬೇಕಿದೆ.
ಕಳೆದೆರಡು ವರ್ಷಗಳಿಗಿಂತ ಈ ವರ್ಷ ಹೆಚ್ಚಿನ ಪಕ್ಷಿಗಳು ಆಗಮಿಸಿವೆ. ಪಕ್ಷಿಧಾಮದ ಎಲ್ಲ ಕಡೆ ಪಕ್ಷಿಗಳು ಕಂಡುಬರುತ್ತಿವೆ. ಆದ್ದರಿಂದ ಹೆಚ್ಚಿನ ಸೌಂದರ್ಯ ಬಂದಿದೆ. ಪಕ್ಷಿಧಾಮ ಹಾಗೂ ಕೆರೆಯ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮೋಹನ್, ಉಪ ವಲಯ ಅರಣ್ಯಾಕಾರಿ, ಗುಡವಿ ಶಾಖೆ