ದಾವಣಗೆರೆ:ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ವಿಜಯೋತ್ಸವ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು. ಭಾರತ ಮಾತೆ, ನರೇಂದ್ರ ಮೋದಿ ಪರ ಜಯಕಾರ ಮೊಳಗಿದವು.
ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಪಾದಯಾತ್ರೆಯಿಂದ ಯಾವ ಫಲಿತಾಂಶ ಬರಬಹುದು ಎಂಬುದಕ್ಕೆ ಗುಜರಾತ್ ಚುನಾವಣೆ ಸಾಕ್ಷಿಯಾಗಿದೆ. ಮೋದಿ ಬಗ್ಗೆ ಹಗುರ ಟೀಕೆ ಮಾಡಿದವರಿಗೆ ಗುಜರಾತ್ ಜನತೆ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಕೋವಿಡ್ ಸಂದರ್ಭ, ರಾಷ್ಟ್ರಪತಿ ಆಯ್ಕೆ ವಿಚಾರ, ಹಿಂದುಳಿದ-ಅಲ್ಪಸಂಖ್ಯಾತರು ಹಾಗೂ ಅಭಿವೃದ್ಧಿ ಪರವಾಗಿ ಬಿಜೆಪಿ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಗೆ ಗುಜರಾತ್ ಮತದಾರರು ಏಕಪಕ್ಷೀಯ ಬೆಂಬಲ ನೀಡಿದ್ದು, ಬಿಜೆಪಿ ಸತತ ಏಳನೆ ಬಾರಿಯೂ ಗೆಲುವು ಸಾಧಿಸಿದೆ. 182 ಕ್ಷೇತ್ರಗಳಲ್ಲಿ 156 ಅನ್ನು ಗೆದ್ದಿರುವ ಬಿಜೆಪಿ, ಹಿಂದೆಂಗಿಂತಲೂ ಐತಿಹಾಸಿಕ ಜಯ ದಾಖಲಿಸಿದೆ. ಕಡಿಮೆ ಕ್ಷೇತ್ರ ಗೆಲ್ಲುವಲ್ಲಿಯೂ ಕಾಂಗ್ರೆಸ್ ದಾಖಲೆ ಮಾಡಿದೆ ಎಂದು ವ್ಯಂಗ್ಯವಾಡಿದರು.
ಈ ಚುನಾವಣೆ ಫಲಿತಾಂಶ ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಮರುಕಳಿಸಲಿದೆ. ಬಿಜೆಪಿ ಕಾರ್ಯಕರ್ತರಿಗೆ ಸ್ಪೂರ್ತಿ ತಂದಿದೆ. ಇದೇ ಹುಮ್ಮಸ್ಸಿನಲ್ಲಿ ಕೆಲಸ ಮಾಡಿ ದಾವಣಗೆರೆ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲಿಸಲಿದ್ದಾರೆ. ಅಧಿಕಾರದ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ಸಿಗರಿಗೆ ಅದು ಕನಸಾಗಿಯೇ ಉಳಿಯಲಿದೆ ಎಂದರು.
ಪಾಲಿಕೆ ಸದಸ್ಯ ಎಲ್.ಡಿ.ಗೋಣೆಪ್ಪ ಮಾತನಾಡಿ ಗುಜರಾತ್‌ನಲ್ಲಿ ಮೋದಿ ಮಾಡಿರುವ ಅಭಿವೃದ್ಧಿ ಕೆಲಸಗಳು ಕೈಹಿಡಿದಿವೆ. ಪಕ್ಷಕ್ಕೆ ಈ ಗೆಲುವಿನಿಂದಾಗಿ ಹುರುಪು ಬಂದಿದೆ ಎಂದರು.
ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್.ಶ್ಯಾಮ್, ಬಿ.ಜಿ.ಸಂಗನಗೌಡ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಲಿಂಗರಾಜ್, ಹೇಮಂತಕುಮಾರ್, ಶಿವರಾಜ್ ಪಾಟೀಲ್, ಟಿಂಕರ್ ಮಂಜಣ್ಣ, ರಾಜು ಶಾಮನೂರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಮಹೇಶ್, ಭಾಗ್ಯಮ್ಮ, ಸರ್ವಮಂಗಳಮ್ಮ, ಶಿವನಗೌಡ ಪಾಟೀಲ್, ಎಚ್.ಪಿ.ವಿಶ್ವಾಸ್ ಇತರರಿದ್ದರು.
---