ಜಿಲ್ಲೆ

ಗುಂಡ್ಲುಪೇಟೆಯಲ್ಲಿ ಬಸವ ಜಯಂತಿ ಆಚರಣೆ ನಾಳೆ

ಗುಂಡ್ಲುಪೇಟೆ: ಪಟ್ಟಣದಲ್ಲಿ ಮೇ 19ರಂದು ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ತಾಲೂಕಿನ ಎಲ್ಲ ಗ್ರಾಮಗಳ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಮರಹಳ್ಳಿ ರವಿ ಮನವಿ ಮಾಡಿದರು.

ಮಹಾಸಭಾದ ಪದಾಧಿಕಾರಿಗಳು ಹಾಗೂ ಮುಖಂಡರು ಪ್ರತಿ ಗ್ರಾಮಕ್ಕೆ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಜೆಎಸ್‌ಎಸ್ ಕಲಾ ಮಂಟಪದಲ್ಲಿ ಭಾವಚಿತ್ರದ ಮೆರವಣಿಗೆಗೆ ಮಹಾಸಭಾ ಗೌರವಾಧ್ಯಕ್ಷರಾದ ಸೋಮಹಳ್ಳಿ ಮಠಾಧ್ಯಕ್ಷರಾದ ಸಿದ್ದಮಲ್ಲ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ತಾಲೂಕಿನ ಎಲ್ಲ ಮಠಾಧಿಪತಿಗಳು, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಸೇರಿದಂತೆ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಂದಿಧ್ವಜ, ಮಹಿಳೆಯರಿಂದ ವೀರಗಾಸೆ, ಚಂಡೆ ಮದ್ದಳೆ, ಕಂಸಾಳೆ, ಗಾರುಡಿ ಕುಣಿತ, ಗೊರವರ ಕುಣಿತ ಸೇರಿದಂತೆ ಸುಮಾರು 15ಕ್ಕೂ ಹೆಚ್ಚಿನ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. 15 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಲ್ಲರಿಗೂ ಮಧ್ಯಾಹ್ನ ಸೋಮೇಶ್ವರ ಅನಾಥಾಲಯದ ಬಳಿ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಮಹಾಸಭಾ ಪ್ರಧಾನ ಕಾರ್ಯದರ್ಶಿ ಮಾಡ್ರಹಳ್ಳಿ ನಾಗೇಂದ್ರ, ಯುವ ಘಟಕದ ಅಧ್ಯಕ್ಷ ವೀರನಪುರ ಗುರು ಇತರರು ಸುದ್ದಿಗೋಷ್ಠಿಯಲ್ಲಿದ್ದರು.