ಹಗರಿಬೊಮ್ಮನಹಳ್ಳಿ: ಯಾವುದೇ ಬೇಡಿಕೆಗಳು ಹೋರಾಟ ನಡೆಸದೆ ಈಡೇರಲು ಸಾಧ್ಯವಿಲ್ಲ. ಹೋರಾಟದಲ್ಲಿ ರೈತರು ಗುಂಡೇಟಿಗೆ ಬಲಿಯಾಗಿ 45 ವರ್ಷಗಳು ಕಳೆದಿದ್ದು, ಅವರ ಹೋರಾಟ ನಮಗೆ ಸ್ಫೂರ್ತಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಸಲಹಾ ಸಮಿತಿ ಸದಸ್ಯ ಒಪ್ಪತೇಶ ಬಣಕಾರ ಹೇಳಿದರು.
ರೈತರ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿನ ಉಪತಹಸೀಲ್ದಾರ್ ಶಿಲ್ಪಾಗೆ ಮನವಿ ಸಲ್ಲಿಸಿ ಸೋಮವಾರ ಮಾತನಾಡಿದರು. ತಾಲೂಕು ಉಪಾಧ್ಯಕ್ಷ ವಿ.ನಾಗೇಂದ್ರಪ್ಪ ಮಾತನಾಡಿ, ಚನ್ನರಾಯಪಟ್ಟಣದ 1777 ಎಕರೆ ಭೂಸ್ವಾಧೀನ ಕೈಬಿಟ್ಟಿದ್ದನ್ನು ಗೆಜೆಟ್ ಅಧಿಸೂಚನೆ ಹೊರಡಿಸಬೇಕು, ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತಪರಗೊಳಿಸಬೇಕು. ಏತ ನೀರಾವರಿ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಏಣಿಗಿ ಏತ ನೀರಾವರಿ ಯೋಜನೆ ಪಂಪ್‌ಹೌಸ್ ದುರಸ್ತಿಗೊಳಿಸಬೇಕು. ಅರಣ್ಯ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕು. ತಾಲೂಕಿನ ಕೆಚ್ಚಿನಬಂಡಿ ವ್ಯಾಪ್ತಿಯಲ್ಲಿ ಖಾಸಗಿ ಕಬ್ಬಿನ ಕಾರ್ಖಾನೆ ಆರಂಭಿಸಲು ಕೂಡಲೆ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಉಪಾಧ್ಯಕ್ಷರಾದ ಕೆ.ಶಿವಣ್ಣ, ಗುಡ್ಲನೂರು ವಸಂತ, ಪ್ರಧಾನ ಕಾರ್ಯದರ್ಶಿ ಅಲಂಬಾಷ, ಸಹಕಾರ್ಯದರ್ಶಿಗಳಾದ ಮುದುಕಪ್ಪ, ಎಚ್.ಶೇಖರಪ್ಪ, ಕಾರ್ಯಾಧ್ಯಕ್ಷ ಎಚ್.ನಾಗರಾಜ, ಗೌರವಾಧ್ಯಕ್ಷ ಹಲಗೇರಿ ಮಹೇಶ, ಸದಸ್ಯರಾದ ಗಡ್ಡಿ ನಿಂಗಪ್ಪ, ಆರ್.ಎಂ.ವೀರೇಶ, ಗುಡ್ಡಪ್ಪ, ಎನ್.ವೀರಣ್ಣ ಮತ್ತಿತರರು ಇದ್ದರು.