ಬಾಳೆಹೊನ್ನೂರು ಸೀಗೋಡು ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯರು ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಶ್ರವಣ್, ದೇವೇಂದ್ರ, ಸಂಜಯ್, ರಾಮ ಇತರರಿದ್ದರು. 
ಜಿಲ್ಲೆ

ಗುಂಡಿಗೆ ಇಳಿದ ಬಸ್ ಮಗುಚಿ ಪ್ರವಾಸಿಗರಿಗೆ ಗಾಯ

ಬಾಳೆಹೊನ್ನೂರು: ಸೀಗೋಡು ಬಳಿ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಮಧ್ಯಭಾಗದಲ್ಲಿರುವ ಗುಂಡಿಗೆ ಇಳಿದ ಬಸ್‌ನ ಸ್ಟಿಯರಿಂಗ್ ತುಂಡಾಗಿ ಮಗುಚಿ ಬಿದ್ದಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶನಿವಾರ ಬೆಂಗಳೂರಿನ ಖಾಸಗಿ ಕಂಪನಿಯ 17 ಇಂಜಿನಿಯರ್‌ಗಳು ಆಗುಂಬೆಗೆ ಪ್ರವಾಸ ಹೊರಟಿದ್ದು, ಮುಂಜಾನೆ ಸೀಗೋಡು ಬಳಿ ಬರುವಾಗ ಮುಖ್ಯರಸ್ತೆಯಲ್ಲಿರುವ ಗುಂಡಿಗೆ ಬಸ್ ಇಳಿದಾಗ ಸ್ಟಿಯರಿಂಗ್ ತುಂಡಾಗಿ ಪಕ್ಕದ ತೋಟಕ್ಕೆ ಪಲ್ಟಿ ಹೊಡೆದಿದೆ.

ಬಸ್ ಚಾಲಕ ಕಾರ್ತಿಕ್, ಪ್ರಯಾಣಿಕರಾದ ಚೈತ್ರಾ, ಮಧು ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್‌ಐ ರವೀಶ್ ಭೇಟಿ ನೀಡಿ ಪರಿಶೀಲಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಯ ಗುಂಡಿಗೆ ಬಸ್ ಇಳಿದು ಮಗುಚಿ ಬಿದ್ದ ಹಿನ್ನೆಲೆಯಲ್ಲಿ ಗುಂಡಿ ಮುಚ್ಚಲು ಒತ್ತಾಯಿಸಿ ಸ್ಥಳೀಯರು ರಸ್ತೆಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.

ಬಿಜೆಪಿ ಮುಖಂಡ ಎ.ಸಿ.ಸಂತೋಷ್ ಅರನೂರು ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಎಲ್ಲ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಗುಂಡಿಗಳನ್ನು ತಪ್ಪಿಸಲು ಹೋಗುವ ವಾಹನ ಚಾಲಕರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಈಡಾಗುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸೀಗೋಡಿನಲ್ಲಿ ಈಗ ಗುಂಡಿ ಇದ್ದ ಜಾಗದಲ್ಲಿಯೇ ಈ ಹಿಂದೆಯೂ ಗುಂಡಿ ಇತ್ತು. ಆ ಸಂದರ್ಭದಲ್ಲಿ ಗುಂಡಿ ಮುಚ್ಚುವಾಗ ಕಳಪೆ ದರ್ಜೆಯಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಈ ಬಗ್ಗೆ ಆಕ್ಷೇಪ ಎತ್ತಿದಾಗ ಕೆಲವೇ ದಿನಗಳಲ್ಲಿ ಮರು ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಅದನ್ನು ಮಾಡಿಲ್ಲ. ಮೂರು ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಗುಂಡಿ ಮುಚ್ಚಿ ಎಂದು ಬಿಜೆಪಿಯಿಂದ ಪ್ರತಿಭಟನೆ ನಡೆಸಿದರೆ, ಆಡಳಿತ ಪಕ್ಷದವರು ಬಿಜೆಪಿಯವರು ಬಾಯಿ ಮುಚ್ಚಲು ಹೇಳಿದ್ದರು. ಸೀಗೋಡು ಮುಖ್ಯರಸ್ತೆಯಲ್ಲಿ ಹಲವು ದಿನಗಳ ಹಿಂದೆಯೇ ಗುಂಡಿಬಿದ್ದಿದ್ದರೂ ಗುಂಡಿ ಮುಚ್ಚಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರಾದ ಶ್ರವಣ್, ದೇವೇಂದ್ರ, ಗಣೇಶ್, ಲತ್ೀ, ಸಂಜಯ್, ತೌಸ್ಿ, ಆರ್ಿ, ರಾಮ ಇತರರಿದ್ದರು.