ಗೋಕರ್ಣ: ಚಂಚಲ ಪ್ರವೃತ್ತಿಯ ಮನಸನ್ನು ಆಧರಿಸಿ ನಡೆಯುವ ನಮ್ಮ ಜೀವನ ಸುಖ-ದುಖಗಳ ಉಯ್ಯಾಲೆಯಲ್ಲಿ ತೂಗುತ್ತಿರುತ್ತದೆ. ಭಗವಂತ ಸಾರಿದ ಗೀತೆಯ ಅಧ್ಯಯನ ಈ ತೂಗುಯ್ಯಾಲೆಯಿಂದ ನಮ್ಮನ್ನು ದೂರಾಗಿಸಿ ಮಾನಸಿಕ ಸಮತೋಲನವನ್ನು ಒದಗಿಸುತ್ತದೆ ಎಂದು ಇಲ್ಲಿನ ಸಂಸ್ಕೃತ ಮಹಾವಿದ್ಯಾಲಯದ ಗೌರವ ಪ್ರಾಧ್ಯಾಪಕ ವೇ. ಗಣೇಶ್ವರ ದೀಕ್ಷಿತ ಹೇಳಿದರು.
ಇಲ್ಲಿನ ಗೀತಾ ಸಂಸ್ಕೃತಿ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ವರ್ತಮಾನದಲ್ಲಿ ಗೀತೆಯ ಪ್ರಸ್ತುತತೆಯ ಬಗ್ಗೆ ಉಪನ್ಯಾಸ ನೀಡಿದರು. ಸುಖ-ಸಂತೋಷದಲ್ಲಿ ಹಿಗ್ಗದೆ, ನೋವು-ದುಃಖದಲ್ಲಿ ಕುಗ್ಗದೆ ಬದುಕುವ ಜೀವನ ಕಲೆಯನ್ನು ಗೀತೆ ನಮಗೆ ದಯಪಾಲಿಸಿದೆ. ಆಶಾ-ಪಾಶ, ಭಯ-ಕ್ರೋಧ ಮುಂತಾದ ಅರಿಷಡ್ವರ್ಗಗಳನ್ನು ಜಯಿಸಿ ಸ್ಥಿತ ಬುದ್ಧಿಯನ್ನು ಹೇಗೆ ಪಡೆಯಬಹುದು ಎನ್ನುವುದಕ್ಕೆ ಗೀತೆಗಿಂತ ಉತ್ತಮ ಮಾರ್ಗದರ್ಶಿ ಅನ್ಯಥಾ ಉಪಲಬ್ಧವಿಲ್ಲ. ಗೀತಾ ಸಂಸ್ಕೃತಿ ಸಂಘಟನೆ ಕ್ಷೇತ್ರದ ನೂರಾರು ಮಕ್ಕಳಿಗೆ ಎಳೆವೆಯಲ್ಲಿಯೇ ನಿತ್ಯ ಗೀತಾ ಪಾಠವನ್ನು ಕಲಿಸಿ ಗೀತಾ ಕಂಠ ಪಾಠದ ಮೂಲಕ ಅವರಲ್ಲಿ ನವ ಜಾಗೃತಿಗೆ ಕಾರಣವಾಗುತ್ತಿರುವುದು ಇಂದಿನ ವಾಟ್ಸ್- ಆಪ್ ದಿನಗಳಲ್ಲಿ ದಾಖಲೆಯ ಸಾಧನೆಯಾಗಿದೆ ಎಂದರು.
ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ. ಗೀತಾ ಗೀತೆಯ ಅನುಪಮತೆ ವಿವರಿಸಿದರು. ಗೀತಾ ಜಯಂತಿ ನಿಮಿತ್ತ ಕೌಟುಂಬಿಕ ಸಾಧನೆ ತೋರಿದ ಐವರು ಮಾತೆಯರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾವಿತ್ರಿ ಗಾಯತ್ರಿ, ಪಾರಂಪರಿಕ ಗೃಹೋಪಯೋಗಿ ಆಹಾರೋತ್ಪನ್ನಗಳನ್ನು ಸಿದ್ಧ ಪಡಿಸುವ ಭಾಗೀರಥಿ ಗಣಪತಿ ಗೋಪಿ, ನಿವೃತ್ತ ಶಿಕ್ಷಕಿ ರತ್ನಾ ಗಣಪತಿ ಶಾಸ್ತ್ರಿ ಕೊಡಗಿ, ಪ್ರಯೋಗಾಲಯ ತಜ್ಞೆ ರಜನಿ ಜಠಾರ ಮತ್ತು ರತ್ನಾ ರಾಮಕೃಷ್ಣ ಶಾಸ್ತ್ರಿ ಕೊಡಗಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಯಶೋದಾ ಚಿತ್ರಿಗೆಮಠ, ಜಯಶ್ರೀ ನಿರ್ವಾಣೇಶ್ವರ, ಸಂಗೀತಾ ಗೋಕರ್ಣ ಹಾಗೂ ಸ್ವಸ್ತಿಕಾ ಟೇಂಗ್ಸೆ ಕಾರ್ಯಕ್ರಮ ನಿರ್ವಹಿಸಿದರು.