filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 4;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 65537;weatherinfo: null;temperature: 40; 
ಜಿಲ್ಲೆ

ಗಿರಿಜನರ ಸಮಸ್ಯೆ ಆಲಿಸಿದ ಶಾಸಕರು

ಕಿರಣ್ ಮಾದರಹಳ್ಳಿ

ಹನೂರು : ತಾಲೂಕಿನ ಗಿರಿಜನರ ಗ್ರಾಮಗಳಾದ ಕಾನ್‌ಮಳೆದೊಡ್ಡಿ, ಅರ್ಧನಾರಿಪುರ, ಕಂಬಿಗುಡ್ಡೆ ಹಾಗೂ ಅರೆಕಡುವಿನದೊಡ್ಡಿ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಿಗೆ ಶನಿವಾರ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಖುದ್ದು ವಾಸ್ತವ ಸ್ಥಿತಿಯನ್ನು ವೀಕ್ಷಿಸಿ ಮನೆ ಇಲ್ಲದ ಫಲಾನುಭವಿಗಳನ್ನು ಆಯ್ಕೆ ಮಾಡಿದರು.

ಹನೂರು ತಾಲೂಕಿನಲ್ಲಿ 84 ಗಿರಿಜನರ ಹಾಡಿಗಳಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಹಲವು ವರ್ಷದಿಂದ ಗಿರಿಜನರಿಗೆ ಮನೆ ಮಂಜೂರಾಗಿರಲಿಲ್ಲ. ಇದರಿಂದ ಮನೆಗಳು ಶಿಥಿಲಗೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಒಂದೇ ಮನೆಯಲ್ಲಿ ಮೂರ‌್ನಾಲ್ಕು ಕುಟುಂಬಗಳು ವಾಸಿಸಬೇಕಾದ ಪರಿಸ್ಥಿತಿ ಇದೆ. ಇನ್ನು ಕೆಲವರು ಪುಟ್ಟದಾದ ಜೋಪಡಿ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮನೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು.

ಶಾಸಕರಿಂದಲೇ ಮನೆ ಫಲಾನುಭವಿಗಳ ಆಯ್ಕೆ: ಈ ಬಗ್ಗೆ ಶಾಸಕ ಎಂ.ಆರ್ ಮಂಜುನಾಥ್ ಅವರು ಗಿರಿಜನರ ಮನೆಗಳ ವಾಸ್ತವ ಸ್ಥಿತಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿಶೇಷ ಯೋಜನೆಯಡಿ 1,248 ಮನೆಗಳು ಮಂಜೂರಾಗಿದೆ. ಮನೆಗಳನ್ನು ನೀಡುವಾಗ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳು ಆರ್ಹ ಫಲಾನುಭವಿಗಳನ್ನು ಕೈ ಬಿಡಲಾಗುತ್ತದೆ. ಜತೆಗೆ ಹಣ ಪಡೆಯುತ್ತಾರೆ ಎಂಬುದು ಗಿರಿಜನರಿಂದ ಗಂಭೀರ ಆರೋಪವಿತ್ತು. ಈ ಹಿನ್ನೆಲೆ ಶಾಸಕ ಎಂ.ಆರ್.ಮಂಜುನಾಥ್ ಅವರು ಅಧಿಕಾರಿಗಳೊಂದಿಗೆ ಶನಿವಾರ ಗಿರಿಜನರ ಗ್ರಾಮಗಳಿಗೆ ಭೇಟಿ ನೀಡಿದರು. ಇಲ್ಲಿನ ಮುಖಂಡರು ಹಾಗೂ ಮಹಿಳೆಯರಿಂದ ಮನೆ ಅಗತ್ಯವಿರುವ ಸಂಬಂಧ ಮಾಹಿತಿ ಪಡೆದರು. ಕೆಲ ಸಮಸ್ಯೆಯನ್ನು ಆಲಿಸಿದರು.

ಬಳಿಕ ಗ್ರಾಮದ ಸುತ್ತಾ ಪ್ರದಕ್ಷಿಣೆ ಹಾಕಿ ದುಸ್ಥಿತಿಯಲ್ಲಿರುವ ಮನೆ ಹಾಗೂ ಜೋಪಡಿಯಲ್ಲಿ ವಾಸಿಸುತ್ತಿರುವುದನ್ನು ಕಣ್ಣಾರೆ ಕಂಡು ಇವರಿಗೆ ಮನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ರೀತಿಯಲ್ಲಿ ಕೆಲ ಗ್ರಾಮಗಳಿಗೆ ತೆರಳಿದ ಶಾಸಕರು ವಾಸ್ತವ ಸ್ಥಿತಿಯನ್ನು ಅರಿತು ಶಿಥಿಲಾವಸ್ಥೆಯ ಮನೆಯಲ್ಲಿ ವಾಸಿಸುತ್ತಿರುವವರನ್ನು ತಿಳಿದು ಅಧಿಕಾರಿಗಳಿಂದ ಪಟ್ಟಿ ತಯಾರಿಸುವುದರ ಮೂಲಕ ಆರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದರು. ಈ ವೇಳೆ ಗಿರಿಜನರು ಗ್ರಾಮಕ್ಕೆ ಹೆಚ್ಚಿನ ಮನೆ ಹಾಗೂ ಒಂದೇ ಕುಟುಂಬದಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಜನರ ಸಮಸ್ಯೆ ಆಲಿಕೆ: ಕಾನ್‌ಮಳೆದೊಡ್ಡಿಗೆ ತೆರಳಿದ್ದ ವೇಳೆ ಇಲ್ಲಿನ ಗಿಜನರು ಗ್ರಾಮದಿಂದ ಕೆರೆದೊಡ್ಡಿ ಗ್ರಾಮಕ್ಕೆ ತೆರಳುವ ಮಣ್ಣಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಇದರಿಂದ ಓಡಾಡಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಈ ವೇಳೆ ಶಾಸಕರು ಪ್ರತಿಕ್ರಿಯಿಸಿ ಮಳೆ ನೀರು ಸರಾಗವಾಗಿ ಹರಿಯಲು ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ರಸ್ತೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಅರ್ಧನಾರಿಪುರಕ್ಕೆ ತೆರಳಿದ್ದ ವೇಳೆ ಇಲ್ಲಿನ ಮಹಿಳೆಯರು ಗ್ರಾಮದಲ್ಲಿ ನಾಲ್ಕೈದು ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಆತಂಕವಿದೆ. ಆದ್ದರಿಂದ ವಿದ್ಯುತ್ ಕಂಬಗಳನ್ನು ಬದಲಾಯಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸುವಂತೆ ಸೆಸ್ಕ್ ಸಿಬ್ಬಂದಿಗೆ ಸೂಚಿಸಿದರು.

ಪಿಡಿಒಗೆ ತರಾಟೆಗೆ: ಅರ್ಧನಾರಿಪುರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಕಾನ್‌ಮಳೆ ದೊಡ್ಡಿ ಗ್ರಾಮದ ಮಹದೇವಸ್ವಾಮಿ ಹಾಗೂ ಇನ್ನಿತರೆ ಗ್ರಾಮಸ್ಥರು ಪಿಡಿಒ ಗೋವಿಂದಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮದ ಚರಂಡಿಯಲ್ಲಿ ಹೂಳು ತುಂಬಿದ್ದು, ದುರ್ವಾಸನೆ ಬೀರುತ್ತಿದ್ದು, ಮನೆಯಲ್ಲಿ ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಕಳೆದ 6 ತಿಂಗಳಿನಿಂದಲೂ ತಿಳಿಸುತ್ತಿದ್ದರೂ ಕಿಂಚಿತ್ತೂ ಕಾಳಜಿ ವಹಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಚರಂಡಿ ಸ್ವಚ್ಛತೆಗೆ ಅಗತ್ಯ ಕ್ರಮವಹಿಸುವಂತೆ ಶಾಸಕರು ಪಿಡಿಒ ಅವರಿಗೆ ಸೂಚಿಸಿದರು. ತಾಲೂಕು ಪರಿಶಿಷ್ಟ ವರ್ಗಗಳ ಸಹಾಯಕ ನಿರ್ದೇಶಕ ರಾಜೇಶ್, ಪಿ.ಜಿ ಪಾಳ್ಯ ಪಿಡಿಒ ನಂಜುಂಡಸ್ವಾಮಿ, ಮುಖಂಡರಾದ ಮಾದೇಗೌಡ, ನಾಗ, ನಟರಾಜು, ಕೇತಮ್ಮ, ಹಾಗೂ ಇನ್ನಿತರರು ಇದ್ದರು.