ಜಿಲ್ಲೆ

ಗಿರಿ ಹಸಿರೀಕರಣಕ್ಕೆ ನಮ್ಮ ನಂದಿ ಆಂದೋಲನ, ಈಶಾ ಫೌಂಡೇಷನ್ ನೇತೃತ್ವದಲ್ಲಿ ಅಭಿಯಾನ, ಸಸಿ ನಾಟಿ ಮೂಲಕ ಸದ್ಗುರು ಚಾಲನೆ

ಚಿಕ್ಕಬಳ್ಳಾಪುರ: ತಾಲೂಕಿನ ಪ್ರವಾಸಿ ತಾಣ ನಂದಿ ಗಿರಿಧಾಮ ಮತ್ತು ಸುತ್ತಲಿನ ಗಿರಿ ಸಾಲಿನಲ್ಲಿ ಹಸಿರೀಕರಣ ಹೆಚ್ಚಿಸಲು ಕಾವೇರಿ ಕೂಗು ಮಾದರಿಯಲ್ಲಿ ಈಶಾ ಫೌಂಡೇಷನ್ ‘ನಮ್ಮ ನಂದಿ ಆಂದೋಲನ’ ಕೈಗೊಂಡಿದೆ. ಶನಿವಾರ ಬೆಟ್ಟದ ತಪ್ಪಲಿನಲ್ಲಿ ಸದ್ಗುರು ಅವರು ಸಸಿ ನೆಡುವುದರೊಂದಿಗೆ ಆಂದೋಲನಕ್ಕೆ ಚಾಲನೆ ನೀಡಿದ್ದು, ಹಸಿರು ಪರಿಸರ ನಿರ್ಮಾಣಕ್ಕೆ ಹರಸಿದರು.

ನಂದಿ ಗಿರಿಧಾಮ ಪ್ರಾಕೃತಿಕ ಸೊಬಗಿನಿಂದ ದೇಶ-ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಜತೆಗೆ ಸ್ಕಂದಿಗಿರಿ, ದಿವ್ಯಗಿರಿ, ಬ್ರಹ್ಮಗಿರಿ ಸೇರಿ ಪಂಚಗಿರಿಗಳ ಸಾಲು ಆಕರ್ಷಕ ಪರಿಸರವನ್ನು ಹೊಂದಿದೆ. ಆದರೆ ಬಡಾವಣೆಗಳ ನಿರ್ಮಾಣ ಸೇರಿ ಮನುಷ್ಯನ ಅತಿಯಾದ ಚಟುವಟಿಕೆಯಿಂದ ಹಂತ ಹಂತವಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿದ್ದು ಇದನ್ನು ಮನಗಂಡ ಈಶಾ ಫೌಂಡೇಷನ್ ಸಸಿಗಳನ್ನು ನೆಡುವುದರ ಮೂಲಕ ಹಸಿರಿನ ವಾತಾವರಣವನ್ನು ನಿರ್ಮಿಸಿ, ಮರು ವೈಭವ ನಿರ್ಮಾಣಕ್ಕೆ ವಿಶೇಷ ಆಂದೋಲನ ಕೈಗೊಂಡಿದೆ.

ನೂರಾರು ಮಂದಿ ಗಿರಿಧಾಮದ ತಪ್ಪಲಿನಲ್ಲಿ ವಿವಿಧ ಗೀತೆಗಳ ಗಾಯನದೊಂದಿಗೆ ಹಾಡಿ ನಲಿದರು. ನೆಲ್ಲಿ, ಆಲ, ನಿಂಬೆ, ಹೊಂಬೆ, ಬೇವು, ಮಾವು ಸೇರಿ ನಾನಾ ಜಾತಿಯ ಸಸಿಗಳನ್ನು ನೆಡಲಾಯಿತು. ಐಟಿ ಬಿಟಿ ನೌಕರರು, ಇಂಜಿನಿಯರ್‌ಗಳು, ವಿದ್ಯಾರ್ಥಿಗಳು ಸೇರಿ ಸ್ವಯಂ ಸೇವಕರು ಉತ್ಸಾಹದಲ್ಲಿ ಗುಂಡಿ ತೆಗೆದು ಸಸಿಗಳನ್ನು ನಾಟಿ ಮಾಡಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ಅರಣ್ಯಸಂರಕ್ಷಣಾಧಿಕಾರಿ ಅರಸಲನ್ ಇತರರಿದ್ದರು.

ನಮ್ಮ ನಂದಿ ಯೋಜನೆ: ನಂದಿಬೆಟ್ಟ ಮತ್ತು ನೆರೆಹೊರೆಯ ಬೆಟ್ಟಗಳಲ್ಲಿ ಸಸಿ, ಪೊದೆ, ಸಣ್ಣಗಿಡ, ಹುಲ್ಲುಗಳು, ವಿಭಿನ್ನ ಹಣ್ಣಿನ ಗಿಡಗಳನ್ನು ನೆಟ್ಟು ಸುಂದರ ಸ್ಥಳವನ್ನಾಗಿ ಪರಿವರ್ತಿಸುವ, ಸ್ಥಳೀಯ ಪ್ರಾಣಿಪಕ್ಷಿಗಳ ಪಾಲನೆಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿರುವುದು ಆಂದೋಲನದ ಮುಖ್ಯ ಉದ್ದೇಶವಾಗಿದೆ. ಮುಂಬರುವ 2 ವರ್ಷಗಳಲ್ಲಿ ಸಸಿಗಳ ಪಾಲನೆಯ ಜವಾಬ್ದಾರಿ ತೆಗೆದುಕೊಂಡು ಹಸಿರಿನ ಉಳಿಯುವಿಕೆಯ ಸಫಲತೆಯನ್ನು ಖಾತ್ರಿಪಡಿಸುವ ಗುರಿ ಹೊಂದಲಾಗಿದೆ.

ಕಾವೇರಿ ಕೂಗು ಮಾದರಿ: ನಾಡಿನ ಜೀವನದಿ ಕಾವೇರಿ ಪುನಶ್ಚೇತನಗೊಳಿಸಲು ಈಗಾಗಲೇ ಈಶಾ ಫೌಂಡೇಷನ್ ‘ಕಾವೇರಿ ಕೂಗು’ ಆಂದೋಲನ ಪ್ರಾರಂಭಿಸಿದೆ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಆರ್ಥಿಕವಾಗಿ ಆದಾಯ ಕೊಡುವ ಮತ್ತು ಪರಿಸರಕ್ಕೆ ಲಾಭದಾಯಕವಾದ ಮರ ಬೆಳೆಸಲು ಉತ್ತೇಜಿಸುವ, ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇತ್ತೀಚೆಗೆ ವಿಶೇಷ ಆ್ಯಪ್ ಸಹ ಬಿಡುಗಡೆಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ‘ನಮ್ಮ ನಂದಿ ಆಂದೋಲನ’ಕ್ಕೆ ಚಾಲನೆ ನೀಡಲಾಗಿದೆ.

ಪ್ರಾಕೃತಿಕ ಸಂಪತ್ತು ರಕ್ಷಣೆ ದೊಡ್ಡ ಪೂಜೆ: ಭಗವಂತ ದೇವಸ್ಥಾನಗಳಲ್ಲಿ ಅಷ್ಟೇ ಅಲ್ಲದೆ ಪ್ರಕೃತಿಯಲ್ಲೂ ನೆಲೆಸಿದ್ದಾನೆ. ಗಿಡಮರಗಳಲ್ಲಿಯೂ ಇದ್ದಾನೆ. ಪ್ರಾಕೃತಿಕ ಸಂಪತ್ತು ರಕ್ಷಿಸುವುದು ದೊಡ್ಡ ಪೂಜೆಯೇ ಎಂದು ಈಶಾ ಫೌಂಡೇಷನ್ ಸಂಸ್ಥಾಪಕ, ಸದ್ಗುರು ಹೇಳಿದರು. ‘ನಮ್ಮ ನಂದಿ ಆಂದೋಲನ’ಕ್ಕೆ ಚಾಲನೆ ನೀಡಿದ ಸದ್ಗರು, ನಂದಿ ಗಿರಿಧಾಮ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿದೆ. ಪ್ರಾಕೃತಿಕ ಸಂಪತ್ತಿನಿಂದ ಮೈದುಂಬಿಕೊಂಡಿದ್ದು, ಇದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆ ನೀಡಿದರು. ಇತ್ತೀಚಿಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಪ್ರಾಕೃತಿಕ ಸೌಂದರ್ಯವನ್ನು ಸವಿಯುವುದರ ಬದಲು ಹಾಳು ಮಾಡುವ ಕೆಲಸವಾಗುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಿ ಗಿರಿಸಾಲುಗಳನ್ನು ಹಸಿರುಮಯ ಮಾಡೋಣ ಎಂದರು.

ಸರ್ಕಾರದೊಂದಿಗೆ ಕೈ ಜೋಡಿಸಿ: ಈಶಾ ಫೌಂಡೇಷನ್ ನಂದಿ ಗಿರಿಧಾಮದ ಪರಿಸರ ಉಳಿವಿಗೆ ಆಂದೋಲನ ಕೈಗೊಂಡಿರುವುದು ಶ್ಲಾಘನೀಯ. ಪರಿಸರ ಸಂರಕ್ಷಣೆ, ಬಡವರಿಗೆ ಸವಲತ್ತುಗಳನ್ನು ಒದಗಿಸುವಿಕೆ ಸೇರಿ ವಿವಿಧ ಸೇವಾ ಚಟುವಟಿಕೆಗೆ ಸರ್ಕಾರದ ಜತೆಗೆ ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದರು.

ಚಿಕ್ಕಬಳ್ಳಾಪುರದಲ್ಲಿ ಯೋಗ ಕೇಂದ್ರ, ಆಧ್ಯಾತ್ಮಿಕ ಮತ್ತು ನಾಯಕತ್ವ ಬೆಳವಣಿಗೆಯ ಅಕಾಡೆಮಿ ಮತ್ತು ವಸತಿ ಶಾಲೆಯನ್ನು ಪ್ರಾರಂಭಿಸುವುದರ ಜತೆಗೆ ಈ ಭಾಗದ ಜನರ ಅನುಕೂಲಕ್ಕಾಗಿ ಸಾಮಾಜಿಕ ಸೇವಾ ಚಟುವಟಿಕೆ ಕೈಗೊಳ್ಳಲಾಗುವುದು. ಸದ್ಗುರು, ಈಶ ಫೌಂಡೇಷನ್ ಸಂಸ್ಥಾಪಕರು