ಯಾದಗಿರಿ: ದಸರಾ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಭಾನುವಾರ ಹಾಗೂ ಸೋಮವಾರ ಆಯುಧ ಪೂಜೆ, ವಿಜಯದಶಮಿ ಹಬ್ಬವನ್ನು ಶ್ರದ್ಧಾ-ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಆಯುಧ(ಖಂಡೆ) ಪೂಜೆ ದಿನ ನೂರಾರು ಜನ ಹೊಸ ಬೈಕ್, ವಾಹನ ಖರೀದಿಸಿದ ಖುಷಿಯಲ್ಲಿ ತೇಲಾಡಿದ್ದು ಕಂಡು ಬಂದಿತು. ಜಿಲ್ಲೆಯ ಭವಾನಿ ಮಂದಿರಗಳಿಗೆ ಭಕ್ತರ ದಂಡೇ ಹರಿದು ಬಂದಿತು. ಘಟಸ್ಥಾಪನೆ ನಂತರ ಸತತ ಒಂಬತ್ತು ದಿನ ಜನತೆ ತಮ್ಮ ತಮ್ಮ ಕುಲದೇವತೆಗೆ ದೀಪ ಹಾಕಿ ಆಯುಧ ಪೂಜೆ ದಿನ ವಿಶೇಷ ಪೂಜೆ ಸಲ್ಲಿಸಿದರು.
ಮನೆ ಮುಂದೆ ತಮ್ಮ ವಾಹನಗಳಿಗೆ ತಳಿರು, ತೋರಣಗಳಿಂದ ಅಲಂಕಾರ ಮಾಡಲಾಯಿತು. ನಗರದ ರೈಲ್ವೆ ನಿಲ್ದಾಣ ಸಮೀಪದ ಅಂಬಾಭವಾನಿ ದೇವಸ್ಥಾನ ಮತ್ತು ಶಹಾಪುರ ಪೇಟ ಬಡಾವಣೆಯಲ್ಲಿ ದುಗರ್ಾ ದೇವಸ್ಥಾನ ಸೇರಿ ಯಾದಗಿರಿ ಬೆಟ್ಟದ ಭುವನೇಶ್ವರಿ ಮಂದಿರದಲ್ಲಿ ಸಾವಿರಾರು ಭಕ್ತರು ದರ್ಶನ ಪಡೆದುಕೊಂಡರು. ಬೆಟ್ಟದಲ್ಲಿ ಜನಜಾತ್ರೆಯೇ ಸೇರಿತ್ತು. ತೆಲಂಗಾಣದ ನಾರಾಯಣಪೇಟ ಅರ್ಚಕರ ತಂಡ ವಿಶೇಷ ಹೋಮ ನಡೆಸಿಕೊಟ್ಟಿತು. ಮಕ್ಕಳು, ಮಹಿಳೆಯರು, ಯುವಕರು ಉತ್ಸಾಹದಿಂದ ಬೆಟ್ಟ ಹತ್ತಿ `ಅಂಬಾ ಭವಾನಿ ಮಾತಾ ಕೀ ಜೈ' ಎಂದು ಜೈಕಾರ ಹಾಕುತ್ತ ಭಕ್ತಿ ಮೆರೆದರು.