ಹಾಸನ: ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ ನಿಮಗೆ ಲಂಡನ್‌ನಿಂದ ಗಿಫ್ಟ್ ಪ್ಯಾಕ್ ಬಂದಿದೆ ಎಂದು ಹೇಳಿ ವ್ಯಕ್ತಿಯೊಬ್ಬರಿಂದ 1.75 ಲಕ್ಷ ರೂ. ವಂಚಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಜೂ.28ರಂದು ದೂರುದಾರರ ಮೊಬೈಲ್ ಸಂಖ್ಯೆಗೆ +44518697114 ಸಂಖ್ಯೆಯಿಂದ ಬರ್ತಡೇ ಗಿಫ್ಟ್ ಬಂದಿದೆ. ಗಿಫ್ಟ್‌ಪ್ಯಾಕ್‌ನಲ್ಲಿ ಬೆಲೆ ಬಾಳುವ ಒಡವೆಗಳು, ಫರ್ಫ್ಯೂಮ್ ಮತ್ತು ಮೊಬೈಲ್ ಫೋನ್ ಇದೆ ಎಂದು ವಾಟ್ಸ್‌ಪ್‌ನಲ್ಲಿ ಮೆಸೇಜ್ ಬಂದಿದೆ. ಬಳಿಕ ಜೂ.31ರಂದು ಅಪರಿಚಿತ ಮಹಿಳೆ 9233672391 ಸಂಖ್ಯೆಯಿಂದ ಕರೆ ಮಾಡಿ, ‘ಲಂಡನ್‌ನಿಂದ ಬಂದಿರುವ ಪಾರ್ಸಲ್‌ಅನ್ನು ನಿಮಗೆ ಕಳುಹಿಸಬೇಕಾದರೆ ಅದರ ಟ್ರಾನ್ಸ್‌ಪೋರ್ಟ್ ಚಾರ್ಜ್ 40 ಸಾವಿರ ರೂ. ಆಗುತ್ತದೆ,’ ಎಂದು ಹೇಳಿದ್ದಾರೆ.
ಅದರಂತೆ ದೂರುದಾರರು ಮಹಿಳೆ ನೀಡಿದ ಬ್ಯಾಂಕ್ ಖಾತೆಗೆ ಜು.1ರಂದು ಫೋನ್ ಪೇ ಮೂಲಕ 40 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಜು. 2ರಂದು ದೂರುದಾರರು ಕರೆ ಮಾಡಿದಾಗ ಅಪರಿಚಿತ ಮಹಿಳೆಯು ‘ನಿಮ್ಮ ಪಾರ್ಸಲ್‌ಅನ್ನು ನಾವು ಸ್ಕ್ಯಾನ್ ಮಾಡಿ ನೋಡಲಾಗಿ, ಅದರದಲ್ಲಿ ಲಂಡನ್ ಕರೆನ್ಸಿ ಇದೆ. ಆದ್ದರಿಂದ ಆ ಪಾರ್ಸಲ್ ನಿಮಗೆ ಕಳುಹಿಸಬೇಕಾದರೆ ಇನ್ನೂ 1,25,000 ರೂ. ಚಾರ್ಜ್ ಆಗಿತ್ತದೆ,’ ಎಂದು ಹೇಳಿದ್ದರಿಂದ ದೂರುದಾರರು ಜು. 3ರಂದು ಅಪರಿಚಿತ ಮಹಿಳೆಯ ಖಾತೆಗೆ 75 ಸಾವಿರ ಹಣವನ್ನು ಹಾಗೂ ದೂರುದಾರರ ತಂಗಿಯ ಖಾತೆಯಿಂದ 50 ಸಾವಿರ ರೂ. ಹಣವನ್ನು ಫೋನ್‌ಪೇ ಮಾಡಿದ್ದಾರೆ. ಜು.4ರಂದು ದೂರುದಾರರು ಅಪರಿಚಿತ ಮಹಿಳೆಯ ಮೊಬೈಲ್‌ಗೆ ಕರೆ ಮಾಡಿ ಪಾರ್ಸಲ್ ಬಗ್ಗೆ ವಿಚಾರಿಸಿದಾಗ ಆಕೆ ‘ಪಾರ್ಸಲ್‌ನಲ್ಲಿ 50 ಸಾವಿರ ಲಂಡನ್ ಪೌಂಡ್ಸ್ ಇದೆ. ಅದನ್ನು ಇಂಡಿಯನ್ ಕರೆನ್ಸಿಗೆ ಕನ್ವರ್ಟ್ ಮಾಡಿದರೆ 56ಲಕ್ಷ ರೂ. ಆಗುತ್ತದೆ. ಅದಕ್ಕಾಗಿ ನೀವು ಇನ್ನೂ 2,58,000 ರೂ. ಹಣವನ್ನು ಕೊಡಬೇಕಾಗುತ್ತದೆ,’ ಎಂದು ಹೇಳಿದ್ದಾಳೆ. ಆಗ ಅನುಮಾನ ಬಂದು ವಿಚಾರ ಮಾಡಿದಾಗ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಒಟ್ಟಾರೆ 1,65,000 ರೂ. ವರ್ಗಾವಣೆ ಮಾಡಿಸಿಕೊಂಡಿರುವ ಅಪರಿಚಿತ ಮಹಿಳೆಯನ್ನು ಪತ್ತೆಮಾಡಿ, ಕಾನೂನುಕ್ರಮ ಜರುಗಿಸಬೇಕೆಂದು ದೂರುದಾರರು ಜು.12ರಂದು ಹಾಸನದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
1,96,666 ರೂ. ಮೋಸ
ಬೇಲೂರು ತಾಲೂಕು ಹಳೇಬೀಡು ಪಟ್ಟಣದ ವ್ಯಕ್ತಿಯೊಬ್ಬರಿಗೆ ಜು. 07 ರಂದು 8389805146 ಮೊಬೈಲ್ ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ‘ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಕೊಡುತ್ತೇವೆ. ನಿಮ್ಮ ಮೊಬೈಲ್‌ಗೆ ಒಟಿಪಿ ಬರಲಿದೆ. ಅದನ್ನು ತಿಳಿಸಿ’ ಎಂದು ಹೇಳಿದ್ದಾರೆ. ಅದರಂತೆ ವ್ಯಕ್ತಿ ಮೊಬೈಲ್‌ಗೆ ಬಂದ ಒಟಿಪಿ ಪಡೆದುಕೊಂಡು ಕೆನರಾ ಬ್ಯಾಂಕ್ ಖಾತೆಯಲ್ಲಿನ ಸುಮಾರು 1,96,666 ರೂ. ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಲಾಗಿದೆ. ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು ಎಂದು ಹಣ ಕಳೆದುಕೊಂಡ ವ್ಯಕ್ತಿ ಜು.11ರಂದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.