ಚಿಕ್ಕಮಗಳೂರು: ಪ್ರಸ್ತುತ ಮನುಷ್ಯ ನಿಸರ್ಗದತ್ತ ಗಾಳಿಯ ಬದಲಾಗಿ ಕೃತಕ ಗಾಳಿಗೆ ಪರಿತಪಿಸುವಂತಾಗಿದ್ದು ಈ ಪರಿಸ್ಥಿತಿ ಗಿಡ-ಮರಗಳ ಪ್ರಾಮುಖ್ಯತೆ ಏನೆಂಬುದನ್ನು ತಿಳಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ನಗರಸಭೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಗಿಡ-ಮರಗಳ ಸಂಖ್ಯೆ ತುಂಬಾ ಕ್ಷೀಣವಾಗುತ್ತಿದೆ. ಪ್ರತಿ ಮನೆಗಳಲ್ಲಿಯೂ ಹೆಚ್ಚಾಗಿ ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕು. ಎಲ್ಲರೂ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಜತೆಗೆ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದಲ್ಲಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು.
ನಾಗರಿಕನ ಕರ್ತವ್ಯ:
ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮರಗಿಡಗಳನ್ನು ಹೆಚ್ಚಾಗಿ ಕಡಿಯುತ್ತಿರುವ ಕಾರಣ ಮಾನವನ ವಿನಾಶಕ್ಕೆ ಅವನೇ ಕಾರಣ. ಪ್ರತಿಯೊಬ್ಬರೂ ಮನೆಸುತ್ತ ಮುತ್ತ ಗಿಡ ಮರ ಬೆಳೆಸಬೇಕು. ನೀರಿನ ಜಲಮೂಲ ಸಂರಕ್ಷಿಸಬೇಕು ಎಂದರು. ನಗರಸಭೆಯ ಉದ್ಯಾನ ಅಭಿವೃದ್ಧಿಗೆ 2 ಕೋಟಿ ಮೊತ್ತ ಮೀಸಲಿಟ್ಟಿದ್ದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಕರೊನಾ ಕಾರಣ ಹಿನ್ನಡೆಯಾಗಿದೆ ಎಂದು ಹೇಳಿದರು. ನಗರಸಭೆ ಇಂಜಿನಿಯರ್ ಚಂದನ್, ಸ್ಯಾನಿಟೈಸರಿ ಸೂಪರ್ ವೈಸರ್ ಅಣ್ಣಯ್ಯ, ಕಂದಾಯಾಧಿಕಾರಿ ಬಸವರಾಜ್, ಆರ್ ಐ ಈಶ್ವರ್, ವೆಂಕಟೇಶ್, ಶಶಿಪ್ರಸಾದ್, ವಿವೇಕ್, ಸತೀಶ್ ಮತ್ತಿತರರು ಇದ್ದರು.