ಹೊಳೆನರಸೀಪುರ: ಪ್ರತಿವರ್ಷ ವಿಶ್ವಪರಿಸರ ದಿನದ ಅಂಗವಾಗಿ ಒಂದೊಂದು ಹೊಸ ಘೋಷಣೆ ಇರುತ್ತದೆ. ಈ ವರ್ಷದ ಘೋಷಣೆ ಪ್ಲಾಸ್ಟಿಕ್ ಮಾಲಿನ್ಯ ತಡೆಯಿರಿ ಎಂಬುದಾಗಿದ್ದು, ಜನರು ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಷ್ಟಿಕ್ ಬಳಸಬಾರದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ವಿ.ಎಲ್. ಅಮರ್ ಸಲಹೆ ನೀಡಿದರು.
ತಾಲೂಕಿನ ನಾಗಲಾಪುರದ ಸಮೀಪ ಇರುವ ಸರ್ಕಾರಿ ಐಟಿಐ ಕಾಲೇಜಿನ ಮೈದಾನದಲ್ಲಿ ಸೋಮವಾರ ವಿಶ್ವಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪರಿಸರದ ಅಸಮತೋಲನದಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿ ಉಂಟಾಗಿ ರೈತರಿಗೆ ಹಾಗೂ ಜನರಿಗೆ ತೀವ್ರತೊಂದರೆ ಆಗುತ್ತಿದೆ. ಇಂತಹ ಅಸಮತೋಲನ ಕಾಪಾಡಿಕೊಳ್ಳಲು ಗಿಡಮರಗಳನ್ನು ಬೆಳೆಸಿ ಕಾಪಾಡಬೇಕು. ಸರ್ಕಾರ ಬಹಳ ವರ್ಷಗಳಿಂದ ಗಿಡಮರಗಳನ್ನು ಬೆಳೆಸಿ ಕಾಪಾಡಿ ಎಂದು ಹೇಳುತ್ತಲೇ ಇದೆ. ಆದರೆ ಸಾರ್ವಜನಿಕರಿಂದ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ. ಸಾರ್ವಜನಿಕರು ಪರಿಸರ ಕಾಪಾಡುವುದು ನಮ್ಮ ಕರ್ತವ್ಯ ಎಂದು ತಿಳಿದು ಗಿಡಮರಗಳನ್ನು ಬೆಳೆಸಿ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸಿ ಎಂದು ವಿನಂತಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಜೆ.ಎಸ್.ಪ್ರವೀಣ್ ಮಾತನಾಡಿ, ಪರಿಸರ ದಿನಾಚರಣೆಯ ದಿನ ಗಿಡಗಳನ್ನು ನೆಟ್ಟು ಸುಮ್ಮನಾಗಬಾರದು. ಇದು ನಮ್ಮ ಪ್ರತಿದಿನದ ಜವಾಬ್ದಾರಿ ಹಾಗೂ ಕರ್ತವ್ಯ ಆಗಬೇಕು. ಗಿಡಮರಗಳನ್ನು ನೆಟ್ಟು ರಕ್ಷಿಸುವುದು ನಮ್ಮ ಸಂವಿಧಾನಿಕ ಹಕ್ಕು ಹಾಗೂ ಕರ್ತವ್ಯ. ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಅದನ್ನು ಮರವಾಗಿ ಬೆಳೆಸಿದರೆ ನಮ್ಮ ಪರಿಸರವನ್ನು ಕಾಪಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಐಟಿಐ ಕಾಲೇಜು ಆವರಣದಲ್ಲಿ 20 ಕ್ಕೂ ಹೆಚ್ಚು ಸಸಿಗಳನ್ನು ನಡೆಲಾಯಿತು. ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ಹೇಮಂತ್, ಅರಣ್ಯ ಇಲಾಖೆಯ ಪ್ರದೀಪ್, ನವೀನ್ಕುಮಾರ್, ವಿಶ್ವನಾಥ್, ಐಟಿಐ ಕಾಲೇಜಿನ ಪ್ರಾಂಶುಪಾಲ ನಾರಾಯಣಮೂರ್ತಿ, ತರಬೇತಿ ಅಧಿಕಾರಿ ಮಂಜುನಾಥ್, ಆನಂದ್ ಇದ್ದರು.