ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಎಂ.ಆರ್.ವೆಂಕಟಮುನಿ ಮಾತನಾಡಿದರು. ನೋಟ.ಸಿ.ಗಿರೀಶ್, ಕಾಂತೇಶ್, ಪೌರಾಯುಕ್ತ ಕೇಶವ ಚೌಗುಲೆ ಇದ್ದರು. 
ಜಿಲ್ಲೆ

ಗಿಡಗಂಟಿ ತೆರವುಗೊಳಿಸದಿದ್ದರೆ ಮಾಲೀಕರಿಗೇ ದಂಡ !

ಅರಸೀಕೆರೆ: ನಗರದ ವಿವಿಧ ಬಡಾವಣೆಗಳ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸದಿದ್ದರೆ ಮಾಲೀಕರಿಗೆ ದಂಡ ವಿಧಿಸುವ ಒಮ್ಮತದ ನಿರ್ಣಯಕ್ಕೆ ನಗರಸಭೆ ಸರ್ವಸದಸ್ಯರು ಪಕ್ಷಭೇದ ಮರೆತು ಒಪ್ಪಿಗೆ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಸಿ.ಗಿರೀಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾರುತಿ ನಗರ, ಮಲ್ಲೇಶ್ವರ, ಸುಬ್ರಮಣ್ಯ ನಗರ, ಹೆಂಜಗೊಂಡನಹಳ್ಳಿ ಸೇರಿ ಹಲವು ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿದ್ದು ಹುಳು ಹುಪ್ಪಟೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದ್ದು ನಾಗರಿಕರಿಂದ ದೂರುಗಳು ಕೇಳಿ ಬರುತ್ತಿವೆ. ನಗರಸಭೆ ಅಧಿಕಾರಿಗಳು ಸೂಚನೆ ಬಳಿಕವೂ ಮಾಲೀಕರು ಜಾಗೃತರಾಗದಿದ್ದರೆ ದಂಡ ವಿಧಿಸುವ ನಿರ್ಣಯ ತೆಗೆದುಕೊಳ್ಳೋಣ ಎಂದು ಸಭೆಗೆ ಸಲಹೆ ನೀಡಿದರು. ಸಿ.ಗಿರೀಶ್ ಪ್ರಸ್ತಾಪಕ್ಕೆ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದರು.
10ನೇ ವಾರ್ಡ್ ಸದಸ್ಯ ಈಶಣ್ಣ ಮಾತನಾಡಿ, ನಗರದ ಕಾಳನಕೊಪ್ಪಲು ಗ್ರಾಮಕ್ಕೆ ಹೊಂದಿಕೊಂಡಂತೆ ನಿರ್ಮಾಣಗೊಂಡಿರುವ ನೂತನ ಬಡಾವಣೆಯಲ್ಲಿ ರಸ್ತೆಗಳು ಕಳಪೆಯಾಗಿವೆ. ವಿದ್ಯುತ್, ಕುಡಿಯುವ ನೀರು ಸೇರಿ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಹೀಗಿದ್ದರೂ ರಾತ್ರೋರಾತ್ರಿ ನೂರಾರು ಖಾತೆಗಳನ್ನು ಬಿಡುಗಡೆ ಮಾಡಲಾಗಿದೆ. ಲೋಪವೆಸಗಿರುವ ಅಧಿಕಾರಿ ಹಾಗೂ ಬಡಾವಣೆ ನಿರ್ಮಿಸಿದ ವ್ಯಕ್ತಿಯ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಸದಸ್ಯರಾದ ಅನ್ನಪೂರ್ಣ, ಸಮೀವುಲ್ಲ ಮತ್ತಿತರರು ಮಾತನಾಡಿ,ಕೆಲ ಬಡಾವಣೆಗಳಲ್ಲಿ ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಲಾಗಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಸುಬ್ರಮಣ್ಯ ನಗರ ಬಡಾವಣೆಯಲ್ಲಿ ನೀರು ನಿಲ್ಲುತ್ತಿದೆ ಎನ್ನುವ ಕಾರಣ ಮುಂದಿಟ್ಟು ರಾಜಕಾಲುವೆ ನಿರ್ಮಿಸಲು ನಗರಸಭೆಯ 25 ಲಕ್ಷ ರೂ. ಅನುದಾನ ನಿಗದಿ ಮಾಡಿರುವುದು ಸರಿಯಲ್ಲ. ಇದು ಖಾಸಗಿ ಲೇಔಟ್ ಮಾಲೀಕರ ಹೊಣೆಗಾರಿಕೆಯಾಗಿದ್ದು ಅನುದಾನ ತಡೆಹಿಡಿಯೋಣ ಎಂದು ಕಾಂಗ್ರೆಸ್ ಸದಸ್ಯ ಎಂ.ಆರ್.ವೆಂಕಟಮುನಿ ಸಲಹೆ ನೀಡಿದರು.
ಶುಭಾ ಮನೋಜ್, ಪ್ರೇಮಾ ಮಲ್ಲಿಕಾರ್ಜುನ್ ಮತ್ತಿತರರು ಮಾತನಾಡಿ, ಮೂರ‌್ನಾಲ್ಕು ದಿನಕ್ಕೊಮ್ಮೆ ಹೇಮಾವತಿ ನೀರು ಪೂರೈಕೆ ಮಾಡುತ್ತಿದ್ದು, ವಾರ್ಡ್ ನಿವಾಸಿಗಳಿಗೆ ಉತ್ತರಿಸಲಾಗದ ಸನ್ನಿವೇಶ ನಿರ್ಮಾಣಗೊಂಡಿದೆ. ಕೂಡಲೇ ಹಾಳಾಗಿರುವ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿಸಿ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಿ.ಗಿರೀಶ್ ಕೆಟ್ಟು ಹೋಗಿರುವ ಕೊಳವೆಬಾವಿಗಳ ಸಬ್‌ಮರ್ಸಿಬಲ್ ಪಂಪ್‌ಗಳನ್ನು ರಿವೈಂಡಿಂಗ್ ಮಾಡಿಸಿ ನೀರು ಪೂರೈಕೆ ಮಾಡಲು ಕ್ರಮ ವಹಿಸುವ ಭರವಸೆ ನೀಡಿದರು. ಬೀದಿ ದೀಪ ಅಳವಡಿಕೆ, ಕಸ ವಿಲೇವಾರಿ ಸೇರಿ ಹಲವು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಉಪಾಧ್ಯಕ್ಷ ಕಾಂತೇಶ್, ಪೌರಾಯುಕ್ತ ಕೇಶವ ಚೌಗುಲೆ ಹಾಜರಿದ್ದರು.