ಕೆ.ಎಂ.ದೊಡ್ಡಿ: ಗಿಡ ಬೆಳೆಸುವ ಕಾಳಜಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭೀಮಪ್ಪ ಬಾಣಸಿ ತಿಳಿಸಿದರು.
ಸಮೀಪದ ಕಡಿಲುವಾಗಿಲು ಗ್ರಾಮದಲ್ಲಿ ಮಂಗಳವಾರ ಯುವಕರ ತಂಡ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಮಾಲಿನ್ಯದಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡೋಣ ಎಂದರು.
‘ಗಿಡ ನೆಡು- ಮರ ಮಾಡು’ ಅಭಿಯಾನದ ಸಂಚಾಲಕ ಪೊಲೀಸ್ ಪ್ರಭು ಮಾತನಾಡಿ, ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಗಿಡ ನೆಡುವ ಸವಾಲು ಸ್ವೀಕರಿಸೋಣ ಎಂದರು.
ಕಡಿಲುವಾಗಿಲು ಗ್ರಾಮದ ಸುತ್ತ ಮುತ್ತಲ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಗಿಡಗಳನ್ನು ಗ್ರಾಮದ ಯುವಕರು, ವಿದ್ಯಾರ್ಥಿಗಳು ನೆಡುವ ಮೂಲಕ ಪರಿಸರ ಕಾಳಜಿ ಮೆರದರು. ಅಭಿಯಾನದ ಸಂಯೋಜಕರಾದ ಕೆ.ಎಂ.ಭರತ್, ಶಿವಮಾದು, ಗ್ರಾಪಂ ಸದಸ್ಯೆ ದೇವಿರಮ್ಮ ಮುಖಂಡರಾದ ರಮ್ಯಾ ತಿಮ್ಮೇಗೌಡ, ಕರಡಕೆರೆ ವಸಂತ, ತೊರೆಬೊಮ್ಮನಹಳ್ಳಿ ಪುಟ್ಟಮ್ಮ ಇತರರು ಇದ್ದರು.