ಜಿಲ್ಲೆ

ಗಿಡ ನೆಡಲು ಪಿಂಚಣಿ ಹಣ ಬಳಕೆ

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಇಳಿ ವಯಸ್ಸಿನಲ್ಲಿ ಪಿಂಚಣಿ ಹಣ ಬಂದರೆ ಸಾಕಪ್ಪಾ ಅರಾಮಾಗಿ ಬದುಕು ಕಂಡುಕೊಳ್ಳಬಹುದು ಎಂದು ಜೀವನ ಲೆಕ್ಕಾಚಾರ ಹಾಕುವರ ಮಧ್ಯೆ ಇಲ್ಲೊಬ್ಬ 76ರ ವೃದ್ಧ ತನ್ನ ವೃದ್ಧಾಪ್ಯ ವೇತನವನ್ನು ಗಿಡ ನೆಡುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಬಳಸಿ ಪರಿಸರ ಪ್ರೀತಿ ಮೆರೆದಿದ್ದಾರೆ.
ಹೌದು, ತಳಕು ಗ್ರಾಮದ ವಾಸಿ, ಇಳಿ ವಯಸ್ಸಿನ ಟಿ.ಜಿ.ಓಬಯ್ಯ ತನಗೆ ಬರುತ್ತಿರುವ 800 ರೂ. ಮಾಸಿಕ ವೃದ್ಧಾಪ್ಯ ವೇತನದಲ್ಲಿ 600ಕ್ಕೂ ಹೆಚ್ಚು ಸಸಿ ನೆಟ್ಟು ಕಳೆದ 5 ವರ್ಷದಿಂದ ತನ್ನ ಮಕ್ಕಳಂತೆ ಬೆಳೆಸುತ್ತಿದ್ದಾರೆ.
ತಾಲೂಕಿನ ತಳಕು ಗ್ರಾಮದ ರೈಲ್ವೆ ನಿಲ್ದಾಣ ಸಮೀಪ ಬಂಜರು ಭೂಮಿಯಾಗಿದ್ದ ಸರ್ಕಾರಿ ಜಮೀನಿನಲ್ಲಿ 300 ಬೇವಿನ ಗಿಡ, 300 ಹೊಂಗೆ ಗಿಡ ಬೆಳೆಸಿ ಇತರರಿಗೆ ನೆರಳು ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಗುಂಡಿ ತೋಡಲು ಮತ್ತು ಅರಣ್ಯ ಇಲಾಖೆಯಿಂದ ಗಿಡ ಪಡೆಯಲು ಜತೆಗೆ ಟ್ಯಾಂಕರ್‌ನಲ್ಲಿ ನೀರು ಹಾಕಲು ಬಹಳಷ್ಟು ಕಷ್ಟ ಪಟ್ಟಿರುವ ಓಬಯ್ಯ, ತನ್ನ ಪಿಂಚಣಿ ಹಣವನ್ನು ಬಾಡಿಗೆ ಟ್ಯಾಂಕರ್‌ಗೆ ಮತ್ತು ಗಿಡಗಳ ರಕ್ಷಣೆಗೆ ಸುತ್ತಲೂ ಕಳ್ಳೆ ಹಾಕಲು ಖರ್ಚು ಮಾಡಿಕೊಂಡಿದ್ದಾರೆ.
ಪ್ರತಿದಿನ ತನ್ನ ಜಮೀನಿನ ಬೆಳೆ ಕಾವಲು ಕಾದಂತೆ ಮೇಕೆ, ಕುರಿಗಳಿಂದ ಗಿಡಗಳ ರಕ್ಷಣೆ ಮಾಡಿಕೊಳ್ಳಲು ನಿರಂತರ ಕಾವಲು ಕಾದಿದ್ದಾರೆ. ಐದು ವರ್ಷಗಳ ಪರಿಶ್ರಮದ ಫಲವಾಗಿ ಇಂದು ಹತ್ತಾರು ಅಡಿ ಎತ್ತರಕ್ಕೆ ಬೆಳೆದು ನಿಂತಿರುವ ಗಿಡಗಳು ಇತರರಿಗೆ ನೆರಳು ನೀಡುವ ಮರಗಳಾಗಿವೆ.

ನನಗೆ ಪರಿಸರ ಕಾಳಜಿ ಮತ್ತು 600 ಗಿಡಗಳ ಬೆಳೆಸುವ ಆಸಕ್ತಿ ಬೆಳೆಯಲು ತರಾಸು ಅವರ ಬದುಕಿನ ಪ್ರೇರಣೆ ಇದೆ. ದೂರದೃಷ್ಟಿಯಿಂದ ಯಾರ ನೆರವು ಸಿಗದಿದ್ದರೂ ಬೇಸರಪಡದೆ 5 ವರ್ಷಗಳ ಕಾಲ ಗಿಡಗಳನ್ನು ಮನೆಯ ಮಕ್ಕಳಂತೆ ಪೋಷಣೆ ಮಾಡಿದ್ದೇನೆ. ಪ್ರಸ್ತುತ ಇತರರಿಗೆ ನೆರಳು ಕೊಡುವ ಹಂತಕ್ಕೆ ಮರಗಳಾಗಿ ಬೆಳೆಯುತ್ತಿರುವುದು ನನಗೆ ಖುಷಿ ನೀಡಿದೆ.ಟಿ.ಜಿ. ಓಬಯ್ಯ, ಪರಿಸರ ಪ್ರೇಮಿ