ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ನೃಪತುಂಗ ಬೆಟ್ಟ ತಪ್ಪಲಿನಲ್ಲಿ ಏರ್ಪಡಿಸಲಾಗಿರುವ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ಭಾನುವಾರ ಇತರ ದೇಶಿ ಕ್ರೀಡೆಗಳ ಕಲರವಕ್ಕೂ ಸಾಕ್ಷಿಯಾಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಂಸದ ಸಾಂಸ್ಕೃತಿಕ ಮಹೋತ್ಸವದ ಭಾಗವಾಗಿ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ಆಯೋಜನೆಗೊಂಡಿರುವ ಉತ್ಸವದಲ್ಲಿ ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ದೇಶಿ ಕ್ರೀಡೆಗಳ ಅನುಭವ ಪಡೆದರು. ಪಾಲಕರು ಸಹ ವಿವಿಧ ಆಟಗಳನ್ನು ಆಡಿ ನಲಿದರು.
ಈ ಮೂಲಕ ಉತ್ಸವವು ಗಾಳಿಪಟಕ್ಕೆ ಸೀಮಿತವಾಗದೇ ಮೋಜು, ಮನರಂಜನೆ ಭರಿತ ಕಾರ್ಯಕ್ರಮವಾಗಿ ಮಾರ್ಪಟ್ಟಿತು.
ಭಾನುವಾರ ಬೆಳಗ್ಗೆ ಉತ್ತಮ ಗಾಳಿ ಇದ್ದಿದ್ದರಿಂದ 10 ಗಂಟೆವರೆಗೆ ಗಾಳಿಪಟ ಹಾರಿಸಲಾಯಿತು. ದೇಶ, ವಿದೇಶದ ಗಾಳಿಪಟ ಹಾರಿಸುವವರು ಪಾಲ್ಗೊಂಡಿದ್ದರು. ನಂತರದಲ್ಲಿ ದೇಶಿ ಕ್ರೀಡೆಗಳು ನಡೆದವು. ಹಗ್ಗ ಜಗ್ಗಾಟ, ಲಗೋರಿ, ಚಿನ್ನಿದಾಂಡು, ಗೋಣಿ ಚೀಲದ ಓಟ ಮುಂತಾದ ಕ್ರೀಡೆಗಳು ಗಮನ ಸೆಳೆದವು.
ಕುಸ್ತಿ ಆಕರ್ಷಣೆ: ದೇಶಿ ಕ್ರೀಡೆಗಳಲ್ಲಿ ಕುಸ್ತಿ ಪಂದ್ಯಾವಳಿಗಳು ವಿಶಿಷ್ಟ ಆಕರ್ಷಣೆಯಾಗಿತ್ತು. ಮಧ್ಯಾಹ್ನ ನಡೆದ ಕುಸ್ತಿ ಆಟದಲ್ಲಿ ಧಾರವಾಡ ಅಲ್ಲದೇ ಅಕ್ಕಪಕ್ಕದ ಜಿಲ್ಲೆಯ ಕುಸ್ತಿ ಪಟುಗಳು ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಜಂಗಿ ಕಾಟಾ ನಿಕಾಲಿ ಕುಸ್ತಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ 24 ಪೈಲ್ವಾನರು ಪಾಲ್ಗೊಂಡು ವಿವಿಧ ಪಟ್ಟುಗಳನ್ನು ಪ್ರದರ್ಶಿಸಿ ವೀಕ್ಷಕರ ಮನರಂಜನೆ ಹೆಚ್ಚಿಸಿದರು. ಮಹಿಳಾ ವಿಭಾಗದಲ್ಲಿ ಎಂಟು ಜನ ಪೈಲ್ವಾನರು ಪಾಲ್ಗೊಂಡಿದ್ದರು.
ಸಂಜಯ ಇಂಗಳಿ, ಹನುಮಂತ ಇಂಗಳಿ, ಕಾರ್ತಿಕ ಹಾಗೂ ಮಹಿಳಾ ವಿಭಾಗದಲ್ಲಿ ಕಾವ್ಯ, ಪುಷ್ಪಾ ಅವರು ಉತ್ತಮ ಪ್ರದರ್ಶನ ನೀಡಿದರು. ಎಲ್ಲರಿಗೂ ನಗದು ಪುರಸ್ಕಾರ ನೀಡಲಾಯಿತು ಎಂದು ನಿರ್ಣಾಯಕರ ತಂಡದ ಪೈಲ್ವಾನ್ ಅಶೋಕ ಚಿಲ್ಲಣ್ಣವರ ತಿಳಿಸಿದರು.
ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಹಾಡು, ನೃತ್ಯ ಪ್ರದರ್ಶನ ನೀಡಿದರು.