ದೇವರುಂದ ಗ್ರಾಮದಲ್ಲಿ ರಸ್ತೆಗೆ ಮರ ಬಿದ್ದಿರುವುದು. 
ಜಿಲ್ಲೆ

ಗಾಳಿ, ಮಳೆ ಅಬ್ಬರಕ್ಕೆ ಮುರಿದುಬಿದ್ದ ಮರ, ವಿದ್ಯುತ್ ಕಂಬಗಳು

ಮೂಡಿಗೆರೆ: ತಾಲೂಕಿನಲ್ಲಿ ವಿಪರೀತ ಗಾಳಿಯೊಂದಿಗೆ ಧಾರಾಕಾರ ಮಳೆ ಭಾನುವಾರವೂ ಮುಂದುವರಿಯಿತು. ಚರಂಡಿ ಇಲ್ಲದ ರಸ್ತೆಗಳೆಲ್ಲ ಕೊಚ್ಚಿಕೊಂಡು ಹೋಗಿವೆ. ಅಲ್ಲಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿವೆ. ಪಟ್ಟಣದಲ್ಲಿ ಶನಿವಾರದಿಂದ ವಿದ್ಯುತ್ ಇಲ್ಲ. ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ವಿದ್ಯುತ್ ಇಲ್ಲದೆ ಜನ ಮಳೆ ನೀರನ್ನು ಬಳಸುತ್ತಿದ್ದಾರೆ.

ಒಂದು ವಾರದಿಂದ ಮಳೆ ಬಿಡುವಿಲ್ಲದೆ ಆರ್ಭಟಿಸುತ್ತಿದೆ. ಹೇಮಾವತಿ, ಜಪಾವತಿ, ಸುಂಡಕೆರೆಹಳ್ಳ, ಸುಣ್ಣದಹಳ್ಳ ಮೈದುಂಬಿ ಹರಿಯುತ್ತಿವೆ. ನಾಟಿಗಾಗಿ ಸಿದ್ಧವಾಗಿದ್ದ ಗದ್ದೆ, ಸಸಿಮಡಿಗಳು ಜಲಾವೃತವಾಗಿವೆ. ಮಳೆಯೊಂದಿಗೆ ಗಾಳಿ ಜೊರಾಗಿ ಬೀಸುತ್ತಿರುವುದರಿಂದ ತಾಲೂಕಿನಾದ್ಯಂತ ಕಾಫಿ ತೋಟಗಳಲ್ಲಿ ಮತ್ತು ರಸ್ತೆ ಬದಿಯಲ್ಲಿರುವ ಸಾಲುಮರಗಳು ಬೀಳುತ್ತಿವೆ. ಒಂದು ವಾರದಿಂದ ತೋಟದ ಕೆಲಸಕ್ಕೆ ರಜೆ ನೀಡಲಾಗಿದೆ. ರೈತರು, ಕಾರ್ಮಿಕರು ತೋಟಕ್ಕೆ ಹೋಗದೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.

ನಿರಂತರ ಮಳೆ ಕಾಫಿ, ಕಾಳುಮೆಣಸು, ಶುಂಠಿ ಬೆಳೆಗೆ ಮಾರಕವಾಗಿದೆ. ಕಳೆದ ವಾರ 4 ದಿನ ಮಳೆ ಬಿಡುವು ನೀಡಿದಾಗ ಕೃಷಿಕರು ಕೊಳೆ ರೋಗದ ನಿಯಂತ್ರಣಕ್ಕಾಗಿ ಕಾಫಿ, ಕಾಳುಮೆಣಸು ಮತ್ತು ಶುಂಠಿ ಬೆಳೆಗೆ ರಾಸಾಯನಿಕ ಸಿಂಪಡಿಸಿದ್ದರು. ದ್ರಾವಣ ಸಿಂಪಡಿಸಿದ ದಿನವೇ ಮಳೆ ಆರ್ಭಟ ಮುಂದುವರಿಸಿದ್ದರಿಂದ ಬೆಳೆಗಳು ಮತ್ತೆ ಕೊಳೆರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಚರಂಡಿ ನಿರ್ವಹಣೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಗುಂಡಿಗೊಟರುಗಳಾಗಿವೆ. ಜನ್ನಾಪುರ-ಸಕಲೇಶಪುರ ರಾಜ್ಯ ಹೆದ್ದಾರಿ 7 ಕಿ.ಮೀ, ಕಿರುಗುಂದದಿಂದ ಉದುಸೆಗೆ ತೆರಳುವ 3 ಕಿ.ಮೀ ರಸ್ತೆ, ಬೆಟ್ಟದಮನೆಯಿಂದ ಉಗ್ಗೆಹಳ್ಳಿ ಮೂಲಕ ದೇವರುಂದ ಗ್ರಾಮಕ್ಕೆ ತೆರುಳುವ 12 ಕಿ.ಮೀ ರಸ್ತೆ, ಕನ್ನಾಪುರದಿಂದ ಬಸ್ಕಲ್ ಮೂಲಕ ಹಾಂದಿಗೆ ತೆರಳುವ 9 ಕಿ.ಮೀ ರಾಜ್ಯ ಹೆದ್ದಾರಿ, ಜನ್ನಾಪುರದಿಂದ ಚಂದ್ರಾಪುರಕ್ಕೆ ತೆರಳುವ 8 ಕಿ.ಮೀ ರಸ್ತೆ, ಯು.ಹೊಸಳ್ಳಿ ರಸ್ತೆ ಮಳೆ ನೀರಿನಲ್ಲಿ ಸಂಪೂರ್ಣ ಕೊಚ್ಚಿಕೊಂಡು ಹೋಗಿ ವಾಹನಗಳು ಸಂಚರಿಸಲಾಗದ ಪರಿಸ್ಥಿತಿಯುಂಟಾಗಿದೆ.

ಅಮೃತ್ ಯೋಜನೆಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿಯಿಂದ ಪಟ್ಟಣದ ಕಾಂಕ್ರೀಟ್ ಮತ್ತು ಡಾಂಬರು ರಸ್ತೆಗಳು ಗುಂಡಿಮಯವಾಗಿವೆ. ಕಾಂಕ್ರೀಟ್ ರಸ್ತೆ ಅಗೆದು ನೀರಿನ ಪೈಪ್ ಅಳವಡಿಸಲಾಗಿದೆ. ಕೆಲ ಬಡಾವಣೆಯಲ್ಲಿ ಕಾಮಗಾರಿ ಮಳೆಯಲ್ಲಿ ಮುಂದುವರಿದಿದೆ. ರಸ್ತೆಯಲ್ಲಿ ಕೆಸರಿನಿಂದ ತಿರುಗಾಡಲಾರದ ಪರಿಸ್ಥಿತಿಯಿದೆ. ಕಾಂಕ್ರೀಟ್ ರಸ್ತೆ ಅಗೆದು ಪೈಪ್ ಅಳವಡಿಸಿರುವ ಚರಂಡಿಗೆ ತುಂಬಿದ್ದ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದಾಗಿ ಪಟ್ಟಣದಲ್ಲಿ ಕಾಂಕ್ರೀಟ್ ಮತ್ತು ಡಾಂಬರ್ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿವೆ. ಪಟ್ಟಣದಲ್ಲಿ ಎರಡು ದಿನದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ.