ಜಿಲ್ಲೆ

ಗಾಳಿ, ಗುಡುಗು ಸಹಿತ ಭಾರಿ ಮಳೆ


ಶಹಾಬಾದ್: ಪಟ್ಟಣ ಸೇರಿ ವಾಡಿ, ನಾಲವಾರ ವಲಯದಲ್ಲಿ ಶುಕ್ರವಾರ ಸಂಜೆ ಗುಡುಗು- ಮಿಂಚು ಸಹಿತಿ ಭಾರಿ ಮಳೆ ಸುರಿದಿದ್ದು, ಗಿಡ, ವಿದ್ಯುತ್ ಕಂಬಗಳು ಧರೆಗುರುಳಿವೆ. ಒಂದು ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಸಂಜೆ 4.30 ಗಂಟೆಯಿಂದ ಒಂದು ಗಂಟೆವರೆಗೂ ಮಳೆ ಸುರಿದಿದೆ. ಪಟ್ಟಣದ ರಾಮಾ ಮೊಹಲ್ಲಾ ಪ್ರದೇಶದಲ್ಲಿ ಮರವೊಂದು ಬಿದ್ದಿದ್ದರಿಂದ ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿವೆ. ಜೆಸ್ಕಾಂ ಜೆಇ ಮಹೇಶ ಜೋಗದಣಕರ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ವಿದ್ಯುತ್ ಕಂಬಗಳ ದುರಸ್ತಿಗೆ ಕ್ರಮ ಕೈಗೊಂಡರು.
ನಗರದ ಪಠಾಣಗಲ್ಲಿ ಪ್ರದೇಶದಲ್ಲಿ ಸುಮಾರ 10 ಮನೆಗಳಿಗೆ ನೀರು ನುಗ್ಗಿವೆ. ಇಂದಿರಾ ನಗರ ಮಡ್ಡಿ-2 ರ ಕಾಳನೂರ ಓಣಿಯಲ್ಲಿ ಚೇತನ್ ಶಂಕರ ಎಂಬುವವರ ಮನೆ ಗೋಡೆ ಕುಸಿದಿದೆ. ಜೆಪಿ ಕಾಲನಿಯ ಕಾಶಪ್ಪ ಎಂಬುವವರ ಮನೆ ಮೇಲೆ ಮರ ಬಿದ್ದಿದ್ದರಿಂದ ಗೋಡೆಯಲ್ಲಿ ಬಿರುಕು ಬಿಟ್ಟಿದೆ.