ಜಿಲ್ಲೆ

ಗಾಲಿ ಮೇಲೆ ಅಂಚೆ ಕಚೇರಿ!

ಧಾರವಾಡ: ಲಾಕ್​ಡೌನ್ ಸಂದರ್ಭದಲ್ಲಿ ಗ್ರಾಹರಿಕರಿಗೆ ಅಗತ್ಯ ಸೇವೆಗಳು ಸುಲಭವಾಗಿ ಸಿಗಲಿ ಎಂಬ ಉದ್ದೇಶದಿಂದ ಇಲ್ಲಿಯ ಅಂಚೆ ಇಲಾಖೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಅತ್ಯುತ್ತಮ ಸ್ಪಂದನ ದೊರಕಿದೆ.

ಉತ್ತರ ಕರ್ನಾಟಕ ಭಾಗದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ ಅವರ ಕಲ್ಪನೆ ಹಾಗೂ ಧಾರವಾಡ ವಿಭಾಗೀಯ ಹಿರಿಯ ಅಂಚೆ ಅಧೀಕ್ಷ ಜೆ. ಎಫ್. ಶೇಖರ ಮಾರ್ಗದರ್ಶನದಲ್ಲಿ ಏ. 7ರಿಂದ ‘ಪೋಸ್ಟ್ ಆಫೀಸ್ ಆನ್ ವ್ಹೀಲ್ಸ್ ’ ಎಂಬ ಯೋಜನೆ ಪ್ರಾರಂಭಿಸಲಾಗಿದೆ.

ಈ ‘ಗಾಲಿ ಮೇಲಿನ ಕಚೇರಿ’ಯಲ್ಲಿ 4ಜಿ ಡೊಂಗಲ್, ಕಂಪ್ಯೂಟರ್, ಯುಪಿಎಸ್ ಸೇರಿ ಸಾರ್ವಜನಿಕರ ವ್ಯವಹಾರಕ್ಕೆ ಸಮಸ್ಯೆ ಆಗದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಅಂಚೆ ಕಚೇರಿಯಲ್ಲಿರುವ ಎಸ್​ಬಿ ಖಾತೆಗೆ ಹಣ ಜಮಾವಣೆ, ವಿತ್​ಡ್ರಾ, ಪೋಸ್ಟಲ್ ಲೈಫ್ ಇನ್ಸುರೆನ್ಸ್ ಪ್ರೀಮಿಯಂ ತುಂಬುವುದು, ಸೋಶಿಯಲ್ ಸೆಕ್ಯುರಿಟಿ ಪೆನ್ಶನ್, ಮನಿಯಾರ್ಡರ್ ಪೇಮೆಂಟ್, ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಎಲ್ಲ ಸೌಲಭ್ಯಗಳು ಈ ವಾಹನದಲ್ಲಿ ಲಭ್ಯ. ಇದಲ್ಲದೆ ಯಾವುದೇ ಬ್ಯಾಂಕ್​ನಲ್ಲಿನ ಹಣವನ್ನು ಆಧಾರ ಎನೇಬಲ್ ಪೇಮೆಂಟ್ ಸಿಸ್ಟಂ (ಎಇಪಿ) ಮೂಲಕ ಪಡೆಯುವ ಸೌಲಭ್ಯ ಇರುವುದು ವಿಶೇಷ.

ಒಬ್ಬ ಕ್ಲರ್ಕ್, ಒಬ್ಬ ಸಿಸ್ಟಂ ನಿರ್ವಾಹಕ, ಒಬ್ಬ ಜವಾನ, ಚಾಲಕ, ಮೂರು ಜನ ಸಿಬ್ಬಂದಿ ಇರುವ ವಾಹನ ವಿವಿಧ ಬಡಾವಣೆಗಳಿಗೆ ವಾಹನ ತೆರಳಿದಾಗ ಧ್ವನಿ ವರ್ಧಕದ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತದೆ. ನಂತರ ಗ್ರಾಹಕರಿಗೆ ಸ್ಯಾನಿಟೈಸರ್ ನೀಡಿ ವ್ಯವಹಾರ ನಡೆಸಲು ಅವಕಾಶ ಕಲ್ಪಿಸುತ್ತಿದ್ದಾರೆ. ವಿನೂತನ ಸೇವೆ ಪ್ರಾರಂಭವಾದ ಮೊದಲ ದಿನವೇ (ಏ. 7) ಸುಮಾರು 1 ಲಕ್ಷ ರೂ. ವಹಿವಾಟು ಸಹ ನಡೆದಿದೆ.

ಗಾಲಿ ಮೇಲೆ ಅಂಚೆ ಕಚೇರಿ ನಡೆಸುತ್ತಿರುವುದು ರಾಜ್ಯದಲ್ಲೇ ಪ್ರಥಮ ಎನ್ನಲಾಗಿದೆ.

ಎಲ್ಲೆಲ್ಲೆ ಸೇವೆ?

ಮೊಬೈಲ್ ಅಂಚೆ ಕಚೇರಿ ಏ. 7ರಂದು ಧಾರವಾಡ ಕಲ್ಯಾಣನಗರ, ಏ. 8ರಂದು ಲೈನ್ ಬಜಾರ್ ಹಾಗೂ ಸುತ್ತಮುತ್ತ ಸೇವೆ ಸಲ್ಲಿಸಿದೆ. ಏ. 9ರಂದು ಮೃತ್ಯುಂಜಯನಗರ, 11ರಂದು ಗಣೇಶನಗರದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಸಂಚಾರ ನಡೆಸಲಿದೆ. ಇತರ ದಿನಗಳ ಸೇವೆ ನಿಗದಿ ಮಾಡಲಾಗುತ್ತದೆ.

ಜನರ ಸಹಕಾರ ಮುಖ್ಯಮೊಬೈಲ್ ಅಂಚೆ ಸೇವೆಯಿಂದ ಹಿರಿಯ ನಾಗರಿಕರು ಸೇರಿ ಎಲ್ಲರಿಗೂ ಹೆಚ್ಚಿನ ಅನುಕೂಲವಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಲ್ಲದೆ, ಅಂಚೆ ಸಿಬ್ಬಂದಿ ಜತೆ ಸಹಕಾರ ನೀಡಿ ಸೇವೆಗಳನ್ನು ಪಡೆಯಬೇಕು. ಈ ಪ್ರಯೋಗ ಯಶಸ್ವಿಯಾದಲ್ಲಿ ಇತರ ಜಿಲ್ಲೆಗಳಲ್ಲಿ ಸಹ ಪ್ರಾರಂಭಿಸುವ ಯೋಚನೆ ಇದೆ.
ಈರಣ್ಣ ಮುತ್ನಾಳಿ, ಸಹಾಯಕ ಅಂಚೆ ಅಧೀಕ್ಷಕ, ಧಾರವಾಡ ವಿಭಾಗೀಯ ಕಚೇರಿ.