ಕಲಬುರಗಿ: ಇಲ್ಲಿನ ಸಾಯಿಬಾಬಾ ಮಂದಿರ ಪಕ್ಕದಲ್ಲಿರುವ ಸಾಯಿರಾಮ ನಗರದಲ್ಲಿ ಗಾರ್ಡನ್ಗೆ ಮೀಸಲಿಟ್ಟ ಸ್ಥಳವನ್ನು ಕೆಲವರು ಕಬ್ಜಾ ಮಾಡುತ್ತಿದ್ದು, ಒತ್ತುವರಿ ತಡೆದು ರಕ್ಷಿಸುವಂತೆ ಧರಣಿ ಮಹಿಳಾ ಸಂಘದ ಸಂಚಾಲಕರಾದ ಅರುಣಾ ಹಿರೇಮಠ, ಅಶ್ವಿನಿ ದೇಸಾಯಿ ಮತ್ತು ಜ್ಯೋತಿ ಪಾಟೀಲ್ ಆಗ್ರಹಿಸಿದರು.
ನಗರದಲ್ಲಿ 4 ಎಕರೆಯಷ್ಟು ಇದ್ದ ಉದ್ಯಾನವನ ಈಗಾಗಲೇ ಸಿಕ್ಕವರ ಪಾಲಾಗಿದೆ. ಉಳಿದ ಜಾಗದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಶೆಡ್ ಹಾಕಿಕೊಂಡಿದ್ದಾರೆ. ಈ ಕುರಿತು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಉದ್ಯಾನವನ ಉಳಿಸಲು ಮುಂದಾಗಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಪಾಲಿಕೆ ಆಯುಕ್ತರು ಗಾರ್ಡನ್ ಉಳಿಸಲು ಮುಂದಾಗದೆ ಹೋದರೆ ಹೋರಾಟ ತೀವ್ರಗೊಳಸಿಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗಾರ್ಡನ್ ಜಾಗದಲ್ಲಿ ಕೆಲವು ಪುಂಡರು ಕುಳಿತುಕೊಂಡು ಹೋಗಿ ಬರುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ನೋವು ತೋಡಿಕೊಂಡರು. ಮಾಜಿ ಉಪಮೇಯರ್ ಹೆಸರು ಹೇಳಿಕೊಂಡು ಕೆಲವರು ಪ್ರತಿನಿತ್ಯ ಗದ್ದಲ ಮಾಡುತ್ತಿದ್ದಾರೆ ಎಂದು ಅರುಣಾ ಹಿರೇಮಠ ತಿಳಿಸಿದರು.
ಜಿಲ್ಲಾಡಳಿತ ಕೂಡಲೇ ಉದ್ಯಾನವನ ಅಭಿವೃದ್ಧಿಪಡಿಸಿ ಮಕ್ಕಳಿಗೆ ಮತ್ತು ಬಡಾವಣೆ ನಿವಾಸಿಗಳಿಗೆ ಬಳಕೆ ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಧಾಬಾಯಿ, ಗೌರಿ, ಮಾಲಾ ಇತರರಿದ್ದರು.
ಅನೈತಿಕ ಚಟುವಟಿಕೆಗಳ ತಾಣ
ಸಾಯಿರಾಮ ಬಡಾವಣೆಯ ಗಾರ್ಡನ್ ಜಾಗವನ್ನು ಕೆಲವು ಪುಂಡ ಪೋಕರಿಗಳು ಸೇರಿಕೊಂಡು ಅನೈತಿಕ ಚಟುವಟಿಕೆಗಳ ತಾಣ ಮಾಡಿಕೊಂಡಿದ್ದಾರೆ. ಸಾರಾಯಿ ಬಾಟಲಿಗಳು, ಗುಟಕಾ, ಗಾಂಜಾ ಸೇವನೆ ಮಾಡುವುದು ಮಾಡಿಕೊಂಡು ಪುಂಡಾಟ ಮಾಡುತ್ತಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ನೆಮ್ಮದಿಯಿಂದ ಒಡಾದಂತ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಅರುಣಾ ಹಿರೇಮಠ ದೂರಿದರು.