ಜಿಲ್ಲೆ

ಗಾಯಾಳುಗಳಿಗೆ ನೆರವು ನೀಡಿದ ಕೃಷ್ಣನಾಯಕ್

ಸರಗೂರು: ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಗಾಯಗೊಂಡು

ಚಿಕಿತ್ಸೆ ಪಡೆಯುತ್ತಿರುವ ಕಟ್ಟೆಮನುಗನಹಳ್ಳಿ ಗ್ರಾಮದ ಯುವಕರ ಆರೋಗ್ಯವನ್ನು ಸಮಾಜ ಸೇವಕ ಕೆ.ಎಂ.ಕೃಷ್ಣನಾಯಕ್ ವಿಚಾರಿಸಿದರು.

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ನೆರವು ನೀಡಿ ಮಾತನಾಡಿದ ಅವರು, ಮೈಸೂರಿನಿಂದ ಮಾನಂದವಾಡಿ ಮಾರ್ಗದ ರಸ್ತೆಯು ಅವೈಜ್ಞಾನಿಕವಾಗಿದೆ. ನಿತ್ಯ ಕನಿಷ್ಠ ಎರಡು ಅಪಘಾತ ಪ್ರಕರಣಗಳಾದರೂ ದಾಖಲಾಗುತ್ತಿವೆ. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಿನಲ್ಲಿರುವ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಔಷಧಗಳನ್ನು ಖಾಸಗಿ ಮೆಡಿಕಲ್‌ಗೆ ಬರೆದುಕೊಡುತ್ತಾರೆ. ರಾತ್ರಿ ವೇಳೆ ವೈದ್ಯರಿರುವುದಿಲ್ಲ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಮೈಸೂರಿನ ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಾರೆ. ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಬಾರಿ ತಾಲೂಕಿಗೆ ಭೇಟಿ ನೀಡಿದ್ದಾರೆ. ಆದರೂ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಮೈಸೂರು-ಮಾನಂದವಾಡಿ ರಸ್ತೆ ಹದಗೆಟ್ಟಿದೆ. ಸಿಎಂ ಬರುವ ಮುನ್ನಾ ದಿನ ಅಧಿಕಾರಿಗಳು ತೇಪೆ ಹಾಕುವ ಕೆಲಸ ಮಾಡುತ್ತಾರೆ. ತಾಲೂಕಿನಲ್ಲಿ ಐಷಾರಾಮಿ ರೆಸಾರ್ಟ್ ಗಳಿರುವುದರಿಂದ ಸಿಎಂ ಆಗ್ಗಿಂದಾಗೆ ತಾಲೂಕಿಗೆ ಭೇಟಿ ನೀಡಿ ವಿಶ್ರಾಂತಿ ಪಡೆದು ತೆರಳುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಮೈಸೂರು ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಶಂಭೇಗೌಡ, ಮುಖಂಡರಾದ ಮೊತ್ತ ಬಸವರಾಜಪ್ಪ, ಸುರೇಶ್, ಚಂದ್ರು, ನಂಜನಾಯಕನಹಳ್ಳಿ ಗುರುಸ್ವಾಮಿ, ಬಹದ್ದೂರ್ ಸತೀಶ್, ಕಾಡಸೂರು ರಾಜಣ್ಣ, ಮಾದಾಪುರ ಗಿರೀಶ್, ಪುರ ವೃಷಭೇಂದ್ರ, ವಕೀಲ ಪ್ರಸನ್ನ, ಪ್ರಶಾಂತ್, ಅಭಿ ತೊಂಟದಾರ್ಯ, ಲೇಖನ್, ನರಸಿಂಹರಾಜು ಇದ್ದರು.