ಜಿಲ್ಲೆ

ಗಾಯನ ಸಮಾವೇಶದಲ್ಲಿ ತತ್ವದ ತಾಳ ಮೇಳದ ಸಂಗಮ...

ಕಲಬುರಗಿ: ಮೂಡುಚಟ್ಟಿನೋಳು ಬಂದು, ಮುಟ್ಟಿ ತಟ್ಟಿ ಅಂತೀರಿ... ಎಂದ ಕಡಿಕೋಳ ಮಡಿವಾಳಪ್ಪನ ಸಮಾನತೆಯ ಗೀತೆ, ನಾ ಏನ್ ಬಲ್ಲೇನು ನಿಮ್ಮ ಮನಸಾ ಎಂದ ರಾಮಪೂರದ ಬಕ್ಕಪ್ಪನ ಪದ, ಕನಕದಾಸರ ತೊರೆದು ಜೀವಿಸಬಹುದೇ ಹರಿ ನಿನ್ನ ಪಾದಗಳ... ಹೀಗೆ ಸಾಲು ಸಾಲು ತತ್ವಪದ, ದಾಸರಪದ, ವಚನ, ಖವ್ವಾಲಿಗಳ ಗೀತ ಗಾಯನಕ್ಕೆ ತಾಳ ಮೇಳಗಳ ಸಮ್ಮಿಲನ...

ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿAದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ರಂಗಾಯಣದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ತತ್ವಪದ ಗಾಯನ ಸಮಾವೇಶದಲ್ಲಿ ದೇಸಿ, ಸೌಹಾರ್ದತೆಯ ಗೀತೆಗಳ ಗಾಯನದ ಲಹರಿಯೇ ಹರಿಯಿತು.

ದೇವರಹಿಪ್ಪರಗಿಯ ಬಸವೇಶ್ವರ ಭಜನಾ ಮಂಡಳಿಯಿAದ ಏಕತಾರಿ, ಪುಟ್ಟರಾಜ ಸಂಗೀತ ಕಲಾಬಳಗದಿಂದ ಶಿವಭಜನೆ ಶೈಲಿಯಲ್ಲಿ ಕಡಿಕೋಳ ಮಡಿವಾಳಪ್ಪ, ಶರೀಪರ ತತ್ವಪದಗಳ ಗಾನ ಲಹರಿಯಾದರೆ, ಆಳಂದದ ಜೈ ಹನುಮಾನ ಭಜನಾ ಸಂಘದಿAದ ದ್ಯಾಗಾಯಿ ಗುಂಡಪ್ಪನ ಪದಗಳ ದಿಂಗಡ ಭಜನಿಯಲ್ಲಿ ಹೊರಹೊಮ್ಮಿದವು.

ಮಡಿವಾಳೇಶ್ವರ ಭಜನಾ ಸಂಘದಿAದ ಖೈನೂರ ಕೃಷ್ಣಪ್ಪನ, ಜಲಾಲ ಸಾಹೇಬರ ಪದಗಳು, ನೀಲೂರು ಸಾವಿತ್ರಿಬಾಯಿ ಫುಲೆ ಭಜನಾ ಸಂಘದ ಮಹಿಳೆಯರು ರಾಮಪುರದ ಬಕ್ಕಪ್ಪಯ್ಯ, ಜಂಬಗಿ ಶರಣರ ಪದಗಳು ಹಾಡಿ, ಮನಸೂರೆಗೊಂಡರು. ಅಬ್ದುಲ್ ರೌಫ್ ಗನಿ ಬಂದೇನವಾಜ್‌ರ ತಂಡದಿAದ ಖವ್ವಾಲಿ ಸೌಹಾರ್ದತೆ ಸಾರಿತು.

ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಅವರ ತಂಡವೂ ನಾವು ಬಂದ ಕಾರ್ಯಕ್ಕೆ ನೀವು ಬಂದೀರಿ ವಚನದೊಂದಿಗೆ ತೊರೆದು ಜೀವಿಸಬಹುದೇ ಹರಿ ನಿಮ್ಮ ಪಾದಗಳ ಎನ್ನುವ ಗೀತೆಯೂ ಶ್ರೋತೃಗಳ ಮನತಣಿಸಿತು.

ಚಿಂತಕ ಆರ್.ಕೆ.ಹುಡಗಿ ಉದ್ಘಾಟಿಸಿ, ಮಾತನಾಡಿದರು. ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ಡಾ.ಮುಸ್ತಫಾ ಕೆ.ಎಚ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ರಂಗಾಯಣ ಉಪ ನಿರ್ದೇಶಕಿ ಜಗದೀಶ್ವರಿ ನಾಸಿ, ರಿಜ್ವಾನ್ ಸಿದ್ದಿಕಿ, ಮಳಖೇಡದ ಸಜ್ಜಾದೆ ಸೈಯದ್ ಶಹಾ ಮುಸ್ತಫಾ ಖಾದ್ರಿ, ಲವಿತ್ರ ವಸ್ತçದ, ಸುಜಾತಾ ಕೆ. ಇತರರಿದ್ದರು.

ಡಾ.ಮೀನಾಕ್ಷಿ ಬಾಳಿ ಅವರು ತತ್ವಪದಗಳ ವ್ಯಾಖ್ಯಾನ ಮಾಡಿದರು. ಡಾ.ಸಂಗನಗೌಡ ಹಿರೇಗೌಡ ನಿರೂಪಣೆ ಮಾಡಿದರು.