ಜಿಲ್ಲೆ

ಗಾಯತ್ರಿ ಜಲಾಶಯದಿಂದ ನೀರು ಹರಿಸಲು ಒತ್ತಾಯ

ಚಿತ್ರದುರ್ಗ: ಗಾಯತ್ರಿ ಜಲಾಶಯದ ಎಡ ಮತ್ತು ಬಲ ನಾಲೆಯ, ಶಿರಾ ತಾಲೂಕು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಈ ತಾ ಲೂಕಿನ ಗೌಡಗೆರೆ ಹೋಬಳಿ ವಿವಿಧ ಗ್ರಾಮಗಳ ರೈತರು ಗುರುವಾರ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ಹಿರಿಯೂರು ಮತ್ತು ಶಿರಾ ತಾಲೂಕುಗಳಿಗೆ ಸರತಿಯಂತೆ ಕಳೆದ 60 ವರ್ಷಗಳಿಂದ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಹಿರಿ ಯೂರು ಮೇಲ್ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀತಿ, ನಿಯಮಗಳಿಲ್ಲದೆ ನೀರು ಹರಿಸಲಾಗುತ್ತಿದೆ. ಕಾಲುವೆಗಳಿಗೆ ಅನಧಿಕೃತವಾಗಿ ಪಂಪ್ ಸೆಟ್‌ಗಳನ್ನು ಅಳವಡಿಸಿಕೊಂಡು ನೀರು ಹಾಯಿಸಲಾಗುತ್ತಿದೆ ಎಂದು ದೂರಿದರು. ಈ ಕುರಿತಂತೆ ಶಿರಾ ಶಾಸಕರು, ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಶಿರಾ ತಾಲೂಕಿನ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಶಿರಾ ತಾಲೂಕಿನ ಅಚ್ಚುಕಟ್ಟು ಪ್ರದೇಶದ ಕಾಲು ಭಾಗಕ್ಕೂ ನೀರು ಹರಿದಿಲ್ಲ. ತೆಂಗು, ಅಡಕೆ ಇತ್ಯಾದಿ ಬೆಳೆಗಳನ್ನು ಕಳೆದುಕೊಳ್ಳುವ ಹಂ ತಕ್ಕೆ ಬಂದಿರುವ ರೈತರ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಆದ್ದರಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ ಅನುಕೂಲ ಮಾಡಿಕೊಡಬೇ ಕು. ಇಲ್ಲವಾದಲ್ಲಿ ಗಾಯತ್ರಿ ಜಲಾಶಯದ ತೂಬುಗಳನ್ನು ಕೂಡಲೇ ಬಂದ್ ಮಾಡಬೇಕು. ಈ ಜಲಾಶಯದ ಯಾವುದೇ ಅಚ್ಚುಕಟ್ಟು ಪ್ರದೇಶಕ್ಕೂ ನೀರು ಹರಿಸಬಾರದೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಲಾಶಯ ನೀರಾವರಿ ಸಲಹಾ ಸಮಿತಿ ಸದಸ್ಯ ಎಚ್.ಪಿ.ಶಶಿಧರ್, ನಾಗರಾಜ್, ನಾಗಭೂಷಣ್, ಜಿ.ಹನುಮಂತಪ್ಪ, ಎಚ್.ಜಿ.ದೇವರಾಜ್, ರಮೇಶ್, ಮಧು, ಎಚ್.ಎಂ.ವಿವೇಕಪ್ಪ, ಎಚ್.ಆರ್.ಮಂಜುನಾಥ್, ರಂಗನಾಥಪ್ಪ, ಎಚ್.ಜಿ.ರಾಮದಾಸ್, ಎಚ್.ಜಿ.ಗೋವಿಂದಪ್ಪ, ಕರಿಯಣ್ಣ, ರಂಗಸ್ವಾಮಿ, ಪಾಂಡುರಂಗಪ್ಪ ಸಹಿತ ಉಜ್ಜಿನಕುಂಟೆ, ಮೆಳೇಕೋಟೆ, ಹುಣಸೇಹಳ್ಳಿ, ದಂಡೀಕೆರೆ ಗ್ರಾಮಗಳ ರೈತರು ಇದ್ದರು.