ಜಿಲ್ಲೆ

ಗಾಣಿಗರ ಪಾದಯಾತ್ರೆ ಸೆ.4ರಂದು

ಕೊಪ್ಪಳ: ಗಾಣಿಗ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ಜಿಲ್ಲಾ ಘಟಕದಿಂದ ಸೆ.4ರಂದು ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಿಂದ ಯಲಬುರ್ಗಾವರೆಗೆ ಸ್ವಾಭಿಮಾನಿ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಮಹಾಸಭಾ ಅಧ್ಯಕ್ಷ ಆನಂದ ಕೆ.ಮಂಡ್ಯ ತಿಳಿಸಿದರು.


ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ಹಿಂದಿನ ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಆದರೆ, ಅನುದಾನ ನೀಡಲಿಲ್ಲ. ರಾಜ್ಯ ಸರ್ಕಾರ ತಕ್ಷಣ ನಿಗಮಕ್ಕೆ 500 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು. ಅಭಿವೃದ್ಧಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಸಮುದಾಯ ಮೂಲ ವೃತ್ತಿಯಿಂದ ವಿಮುಖವಾಗಿದೆ. ಜೀವನ ನಡೆಸಲು ಕೃಷಿ ಸೇರಿ ಇತರ ಕೆಲಸ ಮಾಡುತ್ತಿದೆ.

ರಾಜ್ಯದಲ್ಲಿ 65 ಲಕ್ಷ ಜನಸಂಖ್ಯೆ ಹೊಂದಿದ್ದೇವೆ. ಯಲಬುರ್ಗಾದಲ್ಲಿ 90 ಸಾವಿರ ಜನಸಂಖ್ಯೆ ಇದೆ. ನಮ್ಮ ಬೇಡಿಕೆ ಈಡೇರಿಕೆಗೆ ಸಾಂಕೇತಿಕವಾಗಿ ಸಣ್ಣ ಮಟ್ಟದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತೇವೆ. ಈಡೇರಿಸದಿದ್ದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಸುತ್ತೇವೆಂದು ತಿಳಿಸಿದರು. ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲನಗೌಡ ಕೋನನಗೌಡ, ಪ್ರಮುಖರಾದ ಹಾಲೇಶ ರೊಟ್ಟಿ, ವಿರೇಶ ಚರಾರಿ, ಭಿಮಜ್ಜ ಗುರಿಕಾರ, ಅಮರೇಶ ಕಲ್ಲಣ್ಣನವರ ಇತರರಿದ್ದರು.