ಜಿಲ್ಲೆ

ಗಾಜನೂರಿನಲ್ಲಿ ಮಣ್ಣಾದ ಡಾ.ರಾಜ್ ಸಹೋದರಿ ನಾಗಮ್ಮ

ಚಾಮರಾಜನಗರ: ವರನಟ ಡಾ.ರಾಜ್‌ಕುಮಾರ್ ಸಹೋದರಿ, ದೊಡ್ಮನೆಯ ಹಿರಿಯ ಕೊಂಡಿ ನಾಗಮ್ಮ(94) ಅವರ ಅಂತ್ಯಕ್ರಿಯೆ ಗುರುಮಠದ ಸಂಪ್ರದಾಯದಂತೆ ನೆರವೇರಿತು.

ತಾಳವಾಡಿ ಸಮೀಪದ ಗಾಜನೂರಿನ ತೋಟದ ಮನೆಯಲ್ಲಿ ವಾಸವಾಗಿದ್ದ ನಾಗಮ್ಮ ಅವರು ವಯೋಸಹಜ ಖಾಯಿಲೆಯಿಂದ ಶುಕ್ರವಾರ ನಿಧನರಾಗಿದ್ದರು. ಶನಿವಾರ ಬೆಳಗ್ಗೆ ದೊಡ್ಮನೆ ಕುಟುಂಬ ವರ್ಗ, ಅಪಾರವಾದ ಬಂಧು ಬಳಗದವರು ಆಗಮಿಸಿ ಪಾರ್ಥಿವ ಶರೀರದ ದರ್ಶನವನ್ನು ಪಡೆದುಕೊಂಡರು. ಬಳಿಕ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ನಟ ಯುವ ರಾಜ್‌ಕುಮಾರ್ ಅವರು ಪ್ರಾರ್ಥಿವ ಶರೀರಕ್ಕೆ ಪೂಜೆಯನ್ನು ನೆರವೇರಿಸಿದರು. ಡಾ.ರಾಜ್ ಸಹೋದರಿ ನಾಗಮ್ಮ ಅವರು ಇತ್ತೀಚೆಗೆ ಗುಡ್ಡೆಮಠದ ದೀಕ್ಷೆಯನ್ನು ಪಡೆದುಕೊಂಡಿದ್ದರು. ಆಗಾಗಿ ಪತಿ ವೆಂಕಟೇಗೌಡ ಸಮಾಧಿಯ ಸಮೀಪದಲ್ಲೇ ನಾಗಮ್ಮ ಅವರ ಅಂತ್ಯ ಸಂಸ್ಕಾರವನ್ನು ಗುರುಮಠದ ಸಂಪ್ರದಾಯದಂತೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಯಲ್ಲಿ ನಟ ಶಿವರಾಜ್‌ಕುಮಾರ್, ಪತ್ನಿ ಗೀತಾ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಪತ್ರಿ ವಂದಿತಾ, ಡಾ.ರಾಜ್‌ಕುಮಾರ್ ಪುತ್ರಿಯರಾದ ಲಕ್ಷ್ಮೀ, ಪೂರ್ಣಿಮಾ, ನಿರ್ಮಾಪಕ ಚೆನ್ನೇಗೌಡ, ಮಕ್ಕಳು, ಮೊಮ್ಮಕ್ಕಳು ಹಾಗೂ ಹಲವಾರು ಚಿತ್ರನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ಕುಟುಂಬವರ್ಗದವರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಅತ್ತೆ ನಾಗಮ್ಮನ ನೆನೆದು ಶಿವಣ್ಣ ಭಾವುಕ:

ಕೊನೆಯವರೆಗೂ ಅಪ್ಪು ಸಾವಿನ ಸುದ್ದಿ ನಾಗತ್ತೆಗೆ ತಿಳಿದಿರಲಿಲ್ಲ, ಸ್ವಂತ ಮಗನ ನಿಧನದ ಸುದ್ದಿಯೂ ಕೂಡ ತಿಳಿದಿರಲಿಲ್ಲ. ಅದನ್ನು ನೆನಪಿಸಿಕೊಂಡರೆ ಈಗಲೂ ಕಷ್ಟವಾಗುತ್ತದೆ ಎಂದು ನಟ ಶಿವರಾಜ್‌ಕುಮಾರ್ ಅತ್ತೆ ನಾಗಮ್ಮ ಅವರನ್ನು ನೆನೆದು ಭಾವುಕರಾದರು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಪ್ಪಾಜಿಗೆ ಯಾವಾಗಲೂ ನಮ್ಮ ಅವ್ವ ಮತ್ತು ನಾಗತ್ತೆ ಇರಬೇಕಿತ್ತು. ಕಳೆದ ಎರಡು ವಾರದಿಂದೆ ನಾಗತ್ತೆ ಅವರನ್ನು ನೀಡಲು ಬರಬೇಕು ಅಂದುಕೊಂಡಿದ್ದೆ. ನಾನು ನೆನ್ನೆ ಗೋವಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಸುದ್ದಿ ಬಂದಿತು. ಮದ್ರಾಸ್ ಹಾಗೂ ಗಾಜನೂರಿನಲ್ಲಿ ಯಾವಾಗಲೂ ನಮ್ಮ ಜತೆಗೆ ನಾಗತ್ತೆ ಇರುತ್ತಿದ್ದರು. ಅಪ್ಪಾಜಿ ಕುಟುಂಬದಲ್ಲಿ ಇದ್ದ ಹಿರಿಯ ಕೊಂಡಿ ಇವರೊಬ್ಬರೆ. ನಮ್ಮನ್ನು ಎತ್ತಿ ಆಡಿಸಿ ಬೆಳೆಸಿದ್ದರು. ನನ್ನ ಸ್ವಂತ ತಾಯಿಯಂತೆಯೇ ನಾಗತ್ತೆ ಕೂಡ ನನ್ನ ತಾಯಿಯಾಗಿದ್ದರು ಎಂದು ಹಳೆಯ ವಿಚಾರಗಳನ್ನು ಮೆಲುಕು ಹಾಕಿದರು.

ಅಶ್ವಿನಿ ಪುನೀತ್‌ರಾಜ್ ಕುಮಾರ್ ಬಂದರು:

ಅಪ್ಪು ಒಂದು ಸಲ ಬಂದು ನೋಡಿಕೊಂಡು ಹೋಗು ಕಂದ ಎಂದು ಪುನೀತ್‌ರಾಜ್ ಕುಮಾರ್ ಅವರ ಇರುವಿಕೆಯನ್ನು ತನ್ನೊಂದಿಗೆ ಕೊಂಡೊಯ್ದಿರುವ ನಾಗಮ್ಮ ಅವರ ಅಂತ್ಯಸಂಸ್ಕಾರದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗವಹಿಸಿದರು. ಪುತ್ರಿ ವಂದಿತಾ ಅವರೊಟ್ಟಿಗೆ ಬಂದಿದ್ದ ಅವರು, ನಾಗಮ್ಮ ಅವರ ಪ್ರಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು. ದೊಡ್ಮನೆಯ ಹಿರಿಯ ಆತ್ಮಕ್ಕೆ ಶಾಂತಿಯನ್ನು ಕೋರಿ ನಮನವನ್ನು ಸಲ್ಲಿಸಿದರು.