ಜಿಲ್ಲೆ

ಗಾಂಧೀಜಿಯ ಸ್ವರಾಜ್ಯ ಪರಿಕಲ್ಪನೆ ಅರಿವು ಅಗತ್ಯ

ಚಿತ್ರದುರ್ಗ: ಮಹಾತ್ಮಾ ಗಾಂಧೀಜಿ ಅವರ ಸ್ವರಾಜ್ಯದ ಪರಿಕಲ್ಪನೆ ಹಾಗೂ ಆರ್ಥಿಕ ವಿಚಾರಗಳನ್ನು ಯುವ ಜನರಿಂದು ತುರ್ತಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕೊಪ್ಪಳದ ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಪ್ರಭುರಾಜ್ ಕೆ.ನಾಯಕ್ ಹೇಳಿದರು.

ವಾರ್ತಾ ಇಲಾಖೆ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್‌ಲ್ಲಿ ಗುರುವಾರ ಏರ್ಪಡಿಸಿದ್ದ ‘ಮಹಾತ್ಮ ಗಾಂಧೀಜಿ ಕಂಡ ಸ್ವರಾಜ್ಯ ಕಸನು ಹಾಗೂ ಆರ್ಥಿಕ ಚಿಂತನೆಗಳು’ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಗಾಂಧೀಜಿಯನ್ನು ಇಡೀ ಜಗತ್ತು ಅರಿಯಲು ಪ್ರಯತ್ನಿಸುತ್ತಿದ್ದರೆ, ಭಾರತದಲ್ಲಿ ಅವರ ವಿಚಾರ ಮತ್ತು ತತ್ವಗಳನ್ನು ಮರೆಯಲಾಗುತ್ತಿದೆ ಎಂದು ಬೇಸರಿಸಿದರು.

ಗಾಂಧೀಜಿ ಅವರು ಸ್ವರಾಜ್ಯವನ್ನು ವಿಭಿನ್ನ ಅರ್ಥಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸ್ವರಾಜ್ಯ ಎಂದರೆ ಸ್ವಂತ, ರಾಮರಾಜ್ಯ ಎಂದರ್ಥ. ಸ್ವರಾಜ್ಯ ಪರಿಕಲ್ಪನೆಯನ್ನು ಮೊದಲು ದಾದಾಬಾಯಿ ನವರೋಜಿ ಬಳಸಿದರು. ಮಾನವ ಕುಲಕ್ಕೆ ಮಾರ್ಗದರ್ಶನ ಮಾಡುವ ಈ ಕಲ್ಪನೆಯನ್ನು ಗಾಂಧೀಜಿ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದರು ಎಂದರು.

ಸ್ವರಾಜ್ಯ ಎಂದರೆ ಆತ್ಮ ನಿಯಂತ್ರಣ, ಪ್ರಗತಿ. ಇದಕ್ಕೆ ದೇಹ ಮತ್ತು ಮನಸ್ಸಿನ ನಿಯಂತ್ರಣದ ಸಾಮರ್ಥ್ಯವಿರ ಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಘನತೆ, ಗೌರವ, ಸಮಾನತೆ, ಸಹೋದರ ಭಾವನೆ, ವಿಶ್ವಾಸದೊಂದಿಗೆ ಬದುಕಬೇಕೆಂದು ಗಾಂಧೀಜಿ ಹೇಳಿದ್ದರು. ಹರಿಜನರ ಸೇವೆಗೆ ಸದಾ ಸಿದ್ದರಾಗಿದ್ದರು. ಅವರು ತಮ್ಮ ಇಡೀ ಬದುಕನ್ನು ಹರಿಜನರ ಉದ್ಧಾರಕ್ಕಾಗಿ ಸಮಯ ವಿನಿಯೋಗಿಸಿದ್ದರು ಎಂದು ಹೇಳಿದರು.

ಗಾಂಧೀಜಿ ಆರ್ಥಿಕ ಚಿಂತನೆಗಳಲ್ಲಿ ಗ್ರಾಮಗಳು ಗಣರಾಜ್ಯವಾಗಿ ಬದಲಾಗಬೇಕೆಂಬ ಆಶಯವಿದೆ. ಪ್ರತಿ ಗ್ರಾಮವೂ ಸ್ವಾವಲಂಬಿಯಾಗಬೇಕು. ಗುಡಿ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು. ಅಧಿಕಾರ ವಿಕೇಂದ್ರೀಕರಣದ ಅಗತ್ಯವಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆ ಎಲ್ಲ ಹಂತಗಳಲ್ಲಿರಬೇಕೆಂಬ ಕನಸು ಕಂಡಿದ್ದ ಗಾಂಧಿ ವಿಚಾರಗಳನ್ನು ಸೈಡ್‌ಲೈನ್ ಮಾಡಿ ನಮ್ಮದೇ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದು ಬೇಸರಿಸಿದರು.

ಪ್ರಾಚಾರ್ಯ ಡಾ.ಎಚ್.ಗುಡ್ಡದೇಶ್ವರಪ್ಪ ಮಾತನಾಡಿ, ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಹಳ ಜನರು ವಿಫಲರಾಗಿದ್ದಾರೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವರ್ಗ, ವರ್ಣಭೇದ, ನಿರಂಕುಶ ಪ್ರಭುತ್ವ, ವಸಾಹತುಶಾಹಿ, ಬಡತನ, ಜಾತಿ ವ್ಯವಸ್ಥೆಗಳಿಂದ ಇಡೀ ಜಗತ್ತೇ ನರಳಿತು ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಚನ್ನಕೇಶವ, ಮಂಜುನಾಥ್, ಡಾ.ಶಿವಣ್ಣ, ಡಾ.ಮಧುಸೂದನ್, ಲೀಲಾವತಿ, ಪ್ರಾಧ್ಯಾಪಕಿ ಶಕುಂತುಲಾ, ಗ್ರಂಥಪಾಲಕ ಕುಮಾರಸ್ವಾಮಿ ಮತ್ತಿತರರು ಇದ್ದರು.

ಆರ್ಥಿಕ ಪರಿಕಲ್ಪನೆ: ಸ್ವರಾಜ್ಯ ಕಲ್ಪನೆಯಲ್ಲಿ ಗಾಂಧೀಜಿ ಅವರ ಆತ್ಮಚಿಂತನೆಯು ಒಂದು. ಸತ್ಯಾಗ್ರಹ, ಅಹಿಂಸೆ, ಸಾಮಾಜಿಕ ನ್ಯಾಯ ಚಳವಳಿಗಳಲ್ಲಿ ನಿರಂತರ ತೊಡಗಿಸಿಕೊಂಡು ಜೀವನವನ್ನೇ ಮುಡಿಪಾಗಿಟ್ಟಿದ್ದರು. ಸ್ವರಾಜ್ಯ ಪರಿಕಲ್ಪನೆಯಲ್ಲೇ ಅರ್ಥಿಕ ಪರಿಕಲ್ಪನೆ ಇದೆ.-ಡಾ.ಎಚ್.ಗುಡ್ಡದೇಶ್ವರಪ್ಪ, ಪ್ರಾಚಾರ‌್ಯ