ಬಾಗಲಕೋಟೆ: ಸದ್ಯ ರಾಜಕೀಯ ಸ್ಥಿತಿಗತಿಯಲ್ಲಿನ ಅನೇಕ ಸಂಗತಿಗಳು ಬೇಸರ ಉಂಟು ಮಾಡಿವೆ. ರಾಜಕಾರಣಿಗಳನ್ನು ಸಮಾಜ, ಕುಟುಂಬದವರು ಗಮನಿಸುತ್ತಿದ್ದಾರೆ. ಮಹಾತ್ಮಾ ಗಾಂಧೀಜಿ ಅವರು ನೀಡಿದ ಶಾಂತಿಯ ಸಂದೇಶ, ಅಭಿವೃದ್ಧಿ ಆಧಾರ ಮೇಲೆ ಚುನಾವಣೆ, ರಾಜಕಾರಣ ನಡೆದಲ್ಲಿ ಎಲ್ಲ ಸಮಸ್ಯೆ, ಬಿಕ್ಕಟ್ಟಿಗೂ ಪರಿಹಾರ ದೊರೆಯಲಿದೆ ಎಂದು ವಿ.ಪ ವಿರೋಧ ಪಕ್ಷದ ಮಾಜಿ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಕಾನಿಪ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅನೇಕ ವಿಚಾರ ಪ್ರಸ್ತಾಪ ಮಾಡಿದ ಅವರು, ಅನೇಕ ಮುತ್ಸದ್ದಿ ರಾಜಕಾರಣಿಗಳು ಮಾಡಿದ ಸೇವೆ, ತ್ಯಾಗ ಯಾರ ಮರೆಯಬಾರದು. ಅವರ ಆದರ್ಶಗಳನ್ನು ಪಾಲನೆ ಮಾಡಬೇಕು. ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ರಾಜಕಾರಣಿಗಳು ಇರಬೇಕು. ಸಮಗ್ರ ಅಭಿವೃದ್ಧಿಯ ತತ್ವಗಳ ರಾಜಕಾರಣ ಇಂದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆಗಳು ನಡೆಯಬೇಕು. ಕಾಂಗ್ರೆಸ್ ಪಕ್ಷ ಈ ನಿಟ್ಟಿನಲ್ಲಿ ಸಾಗುತ್ತಿದೆ ಎಂದರು.
ಕುಟುಂಬ ರಾಜಕಾರಣಕ್ಕೆ ಪ್ರಾಶಸ್ತ್ಯ ಸಲ್ಲ
ರಾಜಕೀಯದಲ್ಲಿ ಕುಟುಂಬ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡುವದು ಸೂಕ್ತವಲ್ಲ. ಶಾಸಕ, ಸಚಿವನಾದರು ನಾನು ಈ ವರೆಗೆ ನನ್ನ ಕುಟುಂಬದ ಸದಸ್ಯರಿಗೆ ಭಾಗವಹಿಸಲು ಅವಕಾಶ ನೀಡಿಲ್ಲ. ತಮ್ಮ ಮಕ್ಕಳು ಮಾತ್ರ ಬೆಳೆಯಬೇಕು ಎನ್ನುವುದು ಸರಿಯಲ್ಲ.ರಾಜನ ಪುತ್ರ ಪಟ್ಟಕ್ಕೆ ಬರಬೇಕು ಎನ್ನುವುದು ಒಳ್ಳೆಯ ಬೆಳವಣಿಗೆ ಅಲ್ಲ. ನಮ್ಮ ಪುತ್ರಿ ರಾಜಕಾರಣಕ್ಕೆ ಬರುವದಿಲ್ಲ. ಅಳಿಯ ಸ್ವತಂತ್ರ ಇದ್ದಾರೆ. ರಾಜಕಾರಣಕ್ಕೆ ಬರಲು ಒತ್ತಡ ಹಾಕಲ್ಲ ಎಂದ ಅವರು, ರಾಜಕೀಯ ಪಕ್ಷಗಳು ಎರಡನೇ ಹಂತದ ನಾಯಕರನ್ನು ಬೆಳೆಸಬೇಕು. ಕಾರ್ಯಕರ್ತರೇ ಪಕ್ಷಕ್ಕೆ ಭುನಾದಿ. ಅವರ ಶ್ರಮದಿಂದಲೇ ಪಕ್ಷ ಬೆಳೆಯುತ್ತದೆ. ಕಾಂಗ್ರೆಸ್ ಎರಡನೇ ಹಂತದ ನಾಯಕರನ್ನು ಗುರುತಿಸಿ ಬೆಳೆಸುತ್ತಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ಬೇಕೆಂಬುದು ತಪ್ಪಲ್ಲ. ಸ್ಥಾನಮಾನ ಇದರೇ ಜನ ಸೇವೆ ಮಾಡಲು ಸಾಧ್ಯವಾಗುತ್ತದೆ. ಸತ್ಯ, ಪ್ರಮಾಣಿಕತೆ, ಬದ್ಧತೆ ರಾಜಕೀಯ ನಾಯಕರು ಹೆಚ್ಚಿನ ಒತ್ತು ನೀಡಬೇಕು. ಬ್ಲಾಕ್‌ಮೇಲ್, ಸಿಡಿ ರಾಜಕಾರಣ ಮಾಡಬೇಕು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಸಮರ್ಥವಾಗಿ ಎದುರಾಳಿಗಳನ್ನು ಎದುರಿಸಬೇಕು ಹೊರತು ಕುತಂತ್ರದಿಂದ ಅಲ್ಲ ಎಂದು ತಿಳಿಸಿದರು.
ಮೀಸಲಾತಿ ಸರ್ಕಾರ ಸ್ಪಷ್ಟ ನಿರ್ಧಾರ ಬೇಕು..
ಪ್ರಜಾಪ್ರಭುತ್ವದಲ್ಲಿ ವಿವಿಧ ಸಮುದಾಯದವರು ಮೀಸಲಾತಿ ಕೇಳುವುದು ತಪ್ಪಲ್ಲ. ತಮ್ಮ ಬೇಡಿಕೆ ಸಲ್ಲಿಕೆ ಮಾಡುತ್ತಾರೆ. ಅಧಿಕಾರದಲ್ಲಿ ಇದ್ದವರು ಈ ಬಗ್ಗೆ ಪರಿಶೀಲನೆ ಮಾಡಬೇಕು. ಮೀಸಲಾತಿ ಕೊಡುವ, ಬಿಡುವ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಕಾಲ ಹರಣ ಮಾಡುವುದು ಸರಿಯಲ್ಲ. ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆ ಬಹಳ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದೆ. ಕಳೆದ ಸಾರಿ ೧೬೫ ಭರವಸೆಗಳಲ್ಲಿ ೧೫೮ ಈಡೇರಿಸಿದ್ದೇವೆ. ಈ ಸಾರಿ ಅಧಿಕಾರಕ್ಕೆ ಬಂದಲ್ಲಿ ೨೦೦ ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ ೨ ಸಾವಿರ ರೂ. ಸೇರಿದಂತೆ ಇನ್ನಿತರ ಘೋಷಣೆ ಮಾಡಲಾಗಿದೆ. ಅಲ್ಲದೆ ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ೪೦ ಸಾವಿರ ಕೋಟಿಗಳಂತೆ ೫ ವರ್ಷದಲ್ಲಿ ೨ ಲಕ್ಷ ಕೋಟಿ ರೂ. ಬಳಕೆ ಮಾಡಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪ್ರಣಾಳಿಕೆ ಅನುಷ್ಠಾನಗೊಳಿಸುವಲ್ಲಿ ಯಾವುದೇ ಸಂಶಯ ಬೇಡ. ಬಸವಣ್ಣನ ನಾಡಿನಲ್ಲಿ ನುಡಿದಂತೆ ನಡೆಯುತ್ತೇವೆ ಎಂದು ಅಭಯ ನೀಡಿದರು.