ಜಿಲ್ಲೆ

ಗಾಂಧೀಜಿ ಕಟ್ಟಿದಂತಹ ಕಾಂಗ್ರೆಸ್ ಉಳಿದಿಲ್ಲ:ಈಗ ನಕಲಿ ಕಾಂಗ್ರೆಸ್ ರೇವಣ್ಣ ಲೇವಡಿ

ಹಾಸನ: ದೇಶದಲ್ಲಿ ಗಾಂಧೀಜಿ ಅವರು ಕಟ್ಟಿದಂತಹ ಕಾಂಗ್ರೆಸ್ ಈಗ ಉಳಿದಿಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.

ಕಾಂಗ್ರೆಸ್ ನಾಯಕರಿಗೆ ಮುಸಲ್ಮಾನರ ಬಗ್ಗೆ ಮತಾನಾಡುವ ಯಾವ ನೈತಿಕತೆಯೂ ಇಲ್ಲ. ಒಂದಲ್ಲ ಒಂದು ದಿನ ಮುಸ್ಲಿಮರು ಕಾಂಗ್ರೆಸ್ ತಿರಸ್ಕಾರ ಮಾಡುವ ದಿನ ಬಂದೇ ಬರುತ್ತದೆ. ಮುಸಲ್ಮಾನರು ವೋಟು ಹಾಕಲಿ ಬಿಡಲಿ ನಾನು ಬದುಕಿರುವವರೆಗೂ ಜಿಲ್ಲೆಯ ಅಲ್ಪಸಂಖ್ಯಾತರ ಜೊತೆ ಇರುತ್ತೇನೆ. ಈ ಜಿಲ್ಲೆಯೊಳಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ವೀರಶೈವ ಸಮಾಜಕ್ಕೆ ಒಬ್ಬರಿಗೂ ಅವಕಾಶ ನೀಡಲಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಸುಮ್ಮನೆ ಏನನ್ನು ಹೇಳುವುದಿಲ್ಲ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾವು ಯಾರೊಂದಿಗಾದರೂ ಹೋಗುತ್ತೇವೆ ಕಾಂಗ್ರೆಸ್‌ನವರಿಗೆ ಏಕೆ ಹೊಟ್ಟೆ ಉರಿ? ಅವರನ್ನು ಕೇಳಿ ಮೈತ್ರಿ ಮಾಡಿಕೊಳ್ಳಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನವರು ನಮ್ಮನ್ನು ತೆಗೆಯಲೆಬೇಕೆಂದು ಹೊರಟಾಗ ನಾವು ಬಿಜೆಪಿಯೊಂದಿಗೆ ಹೋಗಬೇಕಾಯಿತು. ಅವರು ಅಧಿಕಾರಲ್ಲಿದ್ದಾಗ ನಮ್ಮನ್ನು ದೂರ ತಳ್ಳಿ, ಅಧಿಕಾರ ಇಲ್ಲದಿದ್ದಾಗ ಕೋಮುವಾದಿ ಬಿಜೆಪಿಯನ್ನು ದೂರ ಇಡಬೇಕು ಎಂದು ನಮ್ಮ ಬಳಿಗೆ ಬರುತ್ತಾರೆ. ಈಗಾಗಲೇ ಸಿಪಿಎಂ, ಸಿಪಿಐಎಂ ಪಕ್ಷಗಳಿಗೆ ಟೋಪಿ ಹಾಕಿ ನಮ್ಮನ್ನು ಮುಗಿಸಲು ಹೊರಟಿದ್ದಾರೆ ಎಂದು ದೂರಿದರು.

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಈಗ ಮುಸ್ಲಿಮರ ಬಗ್ಗೆ ಕರುಣೆ ಬಂದಿದ್ದು, ದೇಶದಲ್ಲಿ 60 ವರ್ಷದ ಆಡಳಿತ ನಡೆಸಿದ ಸಂದರ್ಭದಲ್ಲಿ ಈ ಕಾಳಜಿ ಎಲ್ಲಿ ಹೋಗಿತ್ತು? ಜಾತ್ಯಾತೀತ ನಿಲುವಿನ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್‌ನವರು ಮುಸಲ್ಮಾನರಿಗೆ ನೀಡಿರುವ ಕೊಡುಗೆ ಏನು ಎಂದು ಹೇಳಲಿ. ಮುಸಲ್ಮಾನರಿಗೆ ಮೀಸಲಾತಿ, ರಾಜಕೀಯ ಅಧಿಕಾರ, ಎಲ್ಲಾ ರೀತಿಯ ಸವಲತ್ತು ಕೊಟ್ಟಿದ್ದು ದೇವೇಗೌಡರು ಎಂದು ಹೇಳಿದರು.

2-ಎ, 2-ಬಿ, ಪ್ರವರ್ಗ-1 ಹಾಗು ಮಹಿಳೆಯವರಿಗೆ ಮೀಸಲಾತಿ ನೀಡಿದ್ದು ದೇವೇಗೌಡರು. ಇವರು ದೇಶದಲ್ಲಿ 60 ವರ್ಷ ಆಡಳಿತ ನಡೆಸಿ ಅಲ್ಪಸಂಖ್ಯಾತರಿಗೆ ಯಾವ ಕೊಡುಗೆ ನೀಡಿದ್ದಾರೆ. ಈ ಹಿಂದೆ ಲೋಕಸಭೆಯಲ್ಲಿ 240ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈಗ 40 ಸ್ಥಾನಕ್ಕೆ ಕುಸಿಯಲು ಕಾರಣ ಯಾರು ಎಂದು ಪ್ರಶ್ನಿಸಿದರು.

ಇಂದಿರಾಗಾಂಧಿ, ರಾಜೀವ್ ಗಾಂಧಿ ಕಾಲದಿಂದಲೂ ಇಡೀ ದೇಶದಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಮುಖ್ಯಮಂತ್ರಿಯಾಗಿದ್ದವರನ್ನು ಕಣ್ಣೀರು ಹಾಕಿಸಿ ಪಕ್ಷದಿಂದ ಕಳಿಸಿದ ಕಾಂಗ್ರೆಸ್ ನಾಯಕರು ಮುಸ್ಲಿಂ ನಾಯಕರು, ಸಮುದಾಯದ ಬಗ್ಗೆ ಒಣ ಪ್ರೀತಿ ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ರೇವಣ್ಣ ವಾಗ್ದಾಳಿ ನಡೆಸಿ,ಇದೆಲ್ಲಾ ಕೇವಲ ರಾಜಕೀಯ ಲಾಭಕ್ಕಾಗಿ ಆಡುತ್ತಿರುವ ನಾಟಕ ಎಂದ ಅವರು, ಮುಸಲ್ಮಾನ ಬಾಂಧವರಿಗೆ ಇದೆಲ್ಲಾ ಅರ್ಥವಾಗದೇ ಇರದು ಎಂದರು.

ಹಿಂದಿನ ಸರ್ಕಾರ ರದ್ದು ಮಾಡಿದ ಶೇ.4 ರಷ್ಟು ಮುಸ್ಲಿಂ ಮೀಸಲಾತಿಯನ್ನು ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಮರು ಜಾರಿ ಮಾಡುತ್ತೇವೆ ಎಂದರು. ಈ ಈವರೆಗೂ ಏಕೆ ಮಾಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಇದೀಗ ಜೆಡಿಎಸ್ ಬಗ್ಗೆ ಮಾತನಾಡುವ ಕೆಲ ಮುಸ್ಲಿಂ ನಾಯಕರು ಮೀಸಲಾತಿ ಮರುಜಾರಿ ಬಗ್ಗೆ ಏಕೆ ಮಾತನಾಡುತ್ತಿಲ್ಲ ಹೇಳಲಿ ಕಿಡಿಕಾರಿದರು.