ಜಿಲ್ಲೆ

ಗಾಂಧಿ ಕುಟುಂಬದ ಉನ್ನತಿಗೆ ಕಾಂಗ್ರೆಸ್‌ನಿಂದ ಅಂಬೇಡ್ಕರ್ ಕಡೆಗಣನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಕಾಶಗಳನ್ನು ನೀಡಿದರೆ ಅವರು ಶ್ರೇಯಸ್ಸು ಹೆಚ್ಚುತ್ತದೆ, ಗಾಂಧಿ ಮನೆತ ನದ (ನೆಹರು) ಶ್ರೇಯಸ್ಸು ಕಡಿಮೆ ಆಗುತ್ತದೆ ಎಂಬ ಭಯದಿಂದ ಅಂಬೇಡ್ಕರ್‌ಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನಗಳನ್ನೇ ನೀಡಲಿಲ್ಲ. ಕಾಂಗ್ರೆಸ್‌ಗೆ ಇಂದಿಗೂ ಆ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರಿನ ಲಲಿತ ಮಹಲ್ ಪ್ಯಾಲೆಸ್‌ನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿ, ಲೋಕಸಭಾ ಚುನಾವನೆಯಲ್ಲಿ ಅಂಬೇಡ್ಕರ್ ಅವರನ್ನು ಕಾಂಗ್ರೆಸಿಗರು ಸೋಲಿಸಿದರು. ಅವರು ಮೃತಪಟ್ಟ ಸಂದರ್ಭ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡಲಿಲ್ಲ. ಆದರೆ, ಕಾಂಗ್ರೆಸ್ ಇದೀಗ ಕೇವಲ ರಾಜಕೀಯ ಕಾರಣಕೋಸ್ಕರ ಮಾತ್ರ ಅಂಬೇಡ್ಕರ್ ಅವರನ್ನು ಗುಣಗಾನ ಮಾಡುತ್ತಿದೆ ಎಂದು ಟೀಕಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ದೇಶದ ಅವಿಭಾಜ್ಯ ಅಂಗ ಹಾಗೂ ದೇಶದ ಸಂಸ್ಕೃತಿಯ ತಳಹದಿ. ಭಾರತೀಯ ಸಂಸ್ಕೃತಿಯು ದೇಶದ ಅಸ್ಮಿತೆಯಾಗಿದೆ. ಈ ಸಮುದಾಯಗಳ ಅಭಿವೃದ್ಧಿ ನಮ್ಮ ಸರ್ಕಾರದ ಆದ್ಯತೆಯಾಗಿದೆ. ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯಡಿ ಒಟ್ಟು 29 ಸಾವಿರ ಕೋಟಿ ರೂ.ಗಳನ್ನು ನೀಡಿದೆ. ಎರಡು ದಿನಗಳ ಕಾಲ ನಡೆಯುವ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಕುರಿತು ಚರ್ಚೆಯಾಗಲಿ. ಮುಂದೆ ಈ ಸಮುದಾಯಗಳಿಗೆ ರೂಪಿಸಬೇಕಾದ ಯೋಜನೆಗಳನ್ನು ನನ್ನ ಗಮನಕ್ಕೆ ತನ್ನಿ. ನನ್ನ ಮನೆ ಹಾಗೂ ಮನದ ಬಾಗಿಲು ನಿಮಗೋಸ್ಕರ ಸದಾ ತೆರೆದಿರುತ್ತದೆ ಎಂದರು.