ಬಿಡದಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗೊಡ್ಡು ಬೆದರಿಕೆ ಹೆದರುವ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.
ಮುಡಾ ಹಗರಣದ ವಿರುದ್ಧ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಶನಿವಾರ ಪಟ್ಟಣಕ್ಕೆ ಆಗಮಿಸಿದ ವೇಳೆ ಬಿಜಿಎಸ್ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಾದಯಾತ್ರೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿದೆ ಎಂದರು.
ಅಹಿಂದ, ಹಿಂದುಳಿದ ವರ್ಗದ ಹೆಸರು ಹೇಳಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಯಕರು ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ಕೊಡುವ ಸಲುವಾಗಿ ಸಿಎಂ ಹಾಗೂ ಡಿಸಿಎಂ ರಾಜ್ಯದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೆಸರು ಹೇಳದೆ ಕುಟುಕಿದರು.
ಬಹಳ ವರ್ಷಗಳಿಂದ ಮೈಸೂರಿನ ಮುಡಾದಲ್ಲಿ ನಿವೇಶನಗಳಿಗೆ ಸಾವಿರಾರು ಜನ ಅರ್ಜಿ ಹಾಕಿದ್ದಾರೆ. ಇಂತಹವರಿಗೆ ನಿವೇಶನ ನೀಡದೆ ಸಿಎಂ ಸಿದ್ದರಾಮಯ್ಯ ಸುಮಾರು 5 ಸಾವಿರ ಕೋಟಿ ರೂ. ಬೆಲೆ ಬಾಳುವ ನಿವೇಶನಗಳನ್ನು ಚೇಲಾಗಳ ಹೆಸರಿಗೆ ನೀಡಿದ್ದಾರೆ. ನಿರ್ಧಾರದಂತೆ ಪಾದಯಾತ್ರೆ ಮಾಡುತ್ತಿದ್ದೇವೆ. ಮೊದಲ ದಿನದ ಪಾದಯಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಮೈತ್ರಿ ಕಾರ್ಯಕರ್ತರು, ಮುಖಂಡರು ಬಂದು ಪಾದಯಾತ್ರೆ ಯಶಸ್ವಿ ಮಾಡಿದ್ದಾರೆ ಎಂದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಭ್ರಷ್ಟಾಚಾರ ಮಾಡಲು. ನಿಗಮಗಳ ಹಣ ಲೂಟಿ ಮಾಡಿದೆ. ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಹಗಲು ದರೋಡೆ ಮಾಡಿದೆ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆ ನೀಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋತ ಕಾರಣದಿಂದ ಫಲಾನುಭವಿಗಳಿಗೆ ಹಣ ನೀಡುತ್ತಿಲ. ಇದರಿಂದ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.
ರೈತರ ಹಾಲಿನ ಪ್ರೋತ್ಸಾಹ ಧನದ 1200 ಕೋಟಿ ರೂ. ರೈತರ ಖಾತೆಗಳಿಗೆ ಹಾಕದೆ ಬಾಕಿ ಉಳಿಸಿಕೊಂಡಿದೆ. ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣಗಳ ವಿರುದ್ಧ ಹೋರಾಟವನ್ನು ರಾಜಕೀಯ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದೇ ನಮ್ಮ ಮೈತ್ರಿ ಪಕ್ಷದ ಗುರಿ ಎಂದು ತಿಳಿಸಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ: ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಬಿಡದಿಯಲ್ಲಿ ಡಿ.ಕೆ.ಶಿವಕುಮಾರ್ ವೀರಾವೇಶದ ಭಾಷಣ ಮಾಡಿದ್ದಾರೆ. ಇಲ್ಲಿ ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ತಗ್ಗಿ ಬಗ್ಗಿ ನಡೆಯಬೇಕು. ರಾಜ್ಯದ ಜನರು ಇದಕ್ಕೆಲ್ಲ ಮುಂದೆ ತಕ್ಕಾ ಉತ್ತರ ಕೊಡುತ್ತಾರೆ ಎಂದು ನಿಖಿಲ್ ಹೇಳಿದರು.
ಡಿಕೆಶಿ ಪ್ರಶ್ನೆಗಳಿಗೆ ಕುಮಾರಣ್ಣ ಅವರಿಂದ ಉತ್ತರ: ಬಿಡದಿಯಲ್ಲಿ ಡಿ.ಕೆ.ಶಿವಕುಮಾರ್ ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಭಾನುವಾರ ಇದೇ ಜಾಗದಲ್ಲಿ ಅವರ ಪ್ರಶ್ನೆಗಳಿಗೆ ಕುಮಾರಸ್ವಾಮಿ ಅವರು ಉತ್ತರ ಕೊಡುತ್ತಾರೆ. ಸದನದಲ್ಲಿ ಸರ್ಕಾರ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಪಲಾಯನ ಮಾಡಿದೆ. ರಾಹುಲ್ ಗಾಂಧಿ ಅವರಿಗೆ ನೈತಿಕತೆ ಇದ್ದರೆ ಕೂಡಲೇ ಸಿಎಂ ಅವರ ರಾಜೀನಾಮೆ ಪಡೆಯಲಿ ಎಂದು ನಿಖಿಲ್ ಒತ್ತಾಯಿಸಿದರು.
ಶಾಸಕ ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದ ಇತಿಹಾಸದಲ್ಲೆ ಕಾಂಗ್ರೆಸ್ ಸರ್ಕಾರದಷ್ಟು ಯಾರೂ ಭ್ರಷ್ಟಾಚಾರ ಮಾಡಿಲ್ಲ. ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯ. ರಾಜ್ಯಪಾಲರು ನೀಡಿದ ನೋಟಿಸ್‌ಗೆ ಉತ್ತರ ಕೊಡಲು ಸಾಧ್ಯವಾಗದೆ ಸಚಿವ ಸಂಪುಟ ಸಭೆ ಕರೆದು ಅವರಿಂದ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಹೇಳಿಸುತ್ತಾರೆ. ಜನ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಲಿ ಎಂದು ಒತ್ತಾಯ ಮಾಡಿದರು.
ಡಿಕೆಶಿಗೆ ಅನುಕೂಲ: ಶ್ರೀರಾಮನ ಹೆಸರಿನಲ್ಲಿರುವ ರಾಮನಗರ ಜಿಲ್ಲೆಯ ಹೆಸರು ಬದಲು ಮಾಡಲು ಶಿವಕುಮಾರ್ ಹೊರಟ್ಟಿದ್ದಾರೆ. ಇದರ ಉದ್ದೇಶ ಅಭಿವೃದ್ಧಿಯಾಗಿರದೇ, ಆಸ್ತಿ, ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ. ಗಂಡಸ್ತನದ ಬಗ್ಗೆ ಡಿಕೆಶಿ ಮಾತನಾಡುತ್ತಾರೆ. ಲೂಟಿ ಹೊಡೆಯದೇ, ಹಣ ಮಾಡದೇ, ಅಭಿವೃದ್ಧಿ ಮಾಡಿ ಗಂಡಸ್ತನ ತೋರಿಸಲಿ ಎಂದು ಅಶ್ವತ್ಥನಾರಾಯಣ ಸವಾಲು ಹಾಕಿದರು.
ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಮುನಿರತ್ನ, ಅರವಿಂದ ಬೆಲ್ಲದ, ಸುನೀಲ್ ಕುಮಾರ್, ಹರೀಶ್ ಗೌಡ, ಹರತಾಳು ಹಾಲಪ್ಪ, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಎ.ಮಂಜುನಾಥ್ ಮತ್ತಿತರ ಮುಖಂಡರು ಇದ್ದರು.
ಶಾಸಕನ ಕಿರುಕುಳದಿಂದ ಆತ್ಮಹತ್ಯೆ: ಯಾದಗಿರಿ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಅವರ ಕಿರುಕುಳದಿಂದ ಬೇಸತ್ತು ಪಿಎಸ್‌ಐ ಪರುಶರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರುಶುರಾಮ್ ಅವರ ವರ್ಗಾವಣೆಗೆ ಶಾಸಕರ ಪುತ್ರ 30 ಲಕ್ಷ ರೂ. ಲಂಚ ಕೇಳಿದ್ದರ ಬಗ್ಗೆ ಸ್ವತಃ ಪರಶುರಾಮ್ ಅವರ ಪತ್ನಿ ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.