ಬಾಗಲಕೋಟೆ: ಲೋಕಸಭೆ ವಿರೋಧ ಪಕ್ಷದ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಬಿಜೆಪಿ ನಾಯಕರ ಮಾತಿನ ಲಹರಿ ಹೀನ ಮನಸ್ಥಿತಿ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ದೇಶಕ್ಕಾಗಿ ಕುಟುಂಬಸ್ಥರನ್ನು ಕಳೆದುಕೊಂಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ನಾಯಕರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ದೇಶಕ್ಕಾಗಿ ರಾಹುಲ್ ಅವರ ಅಜ್ಜಿ ಇಂದಿರಾ ಗಾಂಽ ಹಾಗೂ ತಂದೆ ರಾಜೀವ್ ಗಾಂಧಿ ಜೀವವನ್ನೇ ತ್ಯಾಗ ಮಾಡಿದ್ದಾರೆ. ಅವರ ವಿಚಾರವಾಗಿ ಬಿಜೆಪಿ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.
ಸ್ವಾತಂತ್ರ‍್ಯ ಪೂರ್ವ ಹಾಗೂ ಸ್ವಾತಂತ್ರ‍್ಯ ನಂತರದಲ್ಲಿ ದೇಶಕ್ಕೆ ಕಾಂಗ್ರೆಸ್ ಸಾಕಷ್ಟು ಕೊಡುಗೆಗಳ್ನು ನೀಡಿದೆ. ಏನನ್ನೂ ಮಾಡದ ಬಿಜೆಪಿ ಅವರು ಕೇವಲ ಸುಳ್ಳು ಹೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸುಳ್ಳಿನ ಫ್ಯಾಕ್ಟರಿಯನ್ನೇ ಬಿಜೆಪಿ ನಾಯಕರು ತೆರೆದಿದ್ದಾರೆ. ಬಿಜೆಪಿ ಅವರಿಗೆ ಸಂವಿಧಾನ, ಅಂಬೇಡ್ಕರ್ ಬಗ್ಗೆ ಗೌರವವಿಲ್ಲ. ಅದಕ್ಕಾಗಿಯೇ ಪದೇ, ಪದೆ ಸಂವಿಧಾನಕ್ಕೆ ಧಕ್ಕೆ ತರುವ ರೀತಿ ಮಾತುಗಳನ್ನಾಡುತ್ತಾರೆ. ಜನರೇ ಇವರಿಗೆ ತಕ್ಕಪಾಠ ಕಲಿಸಬೇಕೆಂದು ಹೇಳಿದರು.
ಬಿಟಿಡಿಎ ಅಧ್ಯಕ್ಷ, ಮಾಜಿ ಶಾಸಕ ಎಚ್.ವೈ.ಮೇಟಿ ಮಾತನಾಡಿ, ಗಾಂಧಿ ಕುಟುಂಬ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಮೀಸಲಿಟ್ಟಿದೆ. ರಾಹುಲ್ ಗಾಂಧಿ ಅವರು ದೇಶದ ಭರಸವೆಯ ನಾಯಕರಾಗಿ ಬೆಳೆಯುತ್ತಿದ್ದು, ಇದನ್ನು ಸಹಿಸದ ಬಿಜೆಪಿ ನಾಯಕರು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಅವರಿಗೆ ಬೆದರಿಕೆ ಹಾಕುವ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ದೂರಿದರು.
ಶಾಸಕ ಜೆ.ಟಿ.ಪಾಟೀಲ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ, ವಕ್ತಾರ ಚಂದ್ರಶೇಖರ ರಾಠೋಡ, ಮುಖಂಡರಾದ ಆನಂದ ಜಿಗಜಿನ್ನಿ, ರಮೇಶ ಬದ್ನೂರ, ಮುತ್ತು ಜೋಳದ, ಮಲ್ಲಿಕಾರ್ಜುನ ಮೇಟಿ, ಮಲ್ಲಿಕಾರ್ಜುನ ಶಿರೂರ ಇತರರಿದ್ದರು.
ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಭಿಮಸೇನ ಚಿಮ್ಮನಕಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ವಕ್ತಾರ ಚಂದ್ರಶೇಖರ ರಾಠೋಡ, ಆನಂದ ಜಿಗಜಿನ್ನಿ, ರಮೇಶ ಬದ್ನೂರ, ಮುತ್ತು ಜೋಳದ, ಮಲ್ಲಿಕಾರ್ಜುನ ಮೇಟಿ ಇದ್ದರು.