ಚನ್ನರಾಯಪಟ್ಟಣ: ಬೇಡಿಕೆಗಳ ಹಕ್ಕೋತ್ತಾಯಕ್ಕಾಗಿಯಷ್ಟೇ ರೈತಸಂಘ ಹುಟ್ಟಿದ್ದಲ್ಲ. ಎಲ್ಲರೂ ಸಮಾನರು, ಸಂವಿಧಾನಗಳ ಆಶೋತ್ತರಗಳು ಎಲ್ಲರಿಗೂ ಸಮನಾಗಿ ಹಂಚಿಕೆಯಾಗಬೇಕು ಎಂಬ ಗಾಂಧೀಜಿ ಅವರ ಆಶಯಗಳ ಈಡೇರಿಕೆಗಾಗಿ ರೈತಸಂಘ ಹುಟ್ಟಿದೆ ಎಂದು ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸದಸ್ಯರಿಗೆ ಆಯೋಜಿಸಿದ್ದ ಕಾರ್ಯಾಗಾರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಮಸ್ಯೆಗಳನ್ನೇ ಹೊದ್ದು ಮಲಗಿರುವ ರಾಜ್ಯದ ರೈತರ ಹಿತ ಕಾಯುವ ಸಲುವಾಗಿ 90ರ ದಶಕದಲ್ಲಿ ಹುಟ್ಟಿದ ರೈತಸಂಘದ ವಿಚಾರಗಳು, ಧೇಯೋದ್ದೇಶಗಳನ್ನು ಸದಸ್ಯರುತಿಳಿದುಕೊಂಡು, ಸ್ಪಷ್ಟತೆ, ವಿಚಾರತೆ, ಪ್ರಾಮಾಣಿಕತೆ ಹೊಂದಿದ್ದ ಯುವಕರನ್ನು, ವಿದ್ಯಾವಂತರನ್ನು ರೈತಸಂಘದ ಭಾಗವನ್ನಾಗಿಸಬೇಕು. ಪ್ರತಿ ತಾಲೂಕು ಕೇಂದ್ರದಲ್ಲಿ 3 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡು ಕನಿಷ್ಠ 50 ಜನರಿಗೆ ಸಂಘದ ವಿಚಾರವನ್ನು ತಿಳಿಸುವ ಕೆಲಸವಾಗಬೇಕು ಎಂದರು.
ಕಳೆದ ಸಾಲಿನಲ್ಲಿ ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿ ದರಕ್ಕಿಂತ ಕಡಿಮೆಗೆ ಮಾರಾಟ ಮಾಡಿದ್ದರಿಂದ ರೈತರಿಗೆ 21ಸಾವಿರ ಕೋಟಿ ರೂ.ನಷ್ಟು ನಷ್ಟವಾಗಿದೆ. ಸ್ವಾಮಿನಾಥನ್ ವರದಿ ಪ್ರಕಾರ ಲೆಕ್ಕ ಹಾಕಿದ್ದಲ್ಲಿ ಕಳೆದ 11 ತಿಂಗಳಲ್ಲಿ ಮಾರಾಟವಾದ ದವಸ ಧಾನ್ಯಗಳಿಂದ 70 ಸಾವಿರ ಕೋಟಿ ರೂ. ನಷ್ಟು ರೈತ ಸಮುದಾಯ ನಷ್ಟ ಅನುಭವಿಸಿದೆ. ಇದರ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕಾಗಿದೆ. ಇಂತಹ ನೀತಿಯಿಂದ ರೈತರನ್ನು ವಿಮುಕ್ತಿಗೊಳಿಸಿ ಬೆಳೆದ ಬೆಳೆಗೆ ಸರಿಯಾದ ದರಕೊಟ್ಟು ರೈತರಿಂದ ತೆರಿಗೆ ಕಟ್ಟಿಸಿಕೊಳ್ಳಿ ನಾವದಕ್ಕೂ ರೆಡಿ ಎಂಬುದು ನಮ್ಮ ಒತ್ತಾಯವಾಗಿ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ರೈತರ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಲು ಯಾವುದೇ ರಾಜಕೀಯ ಪಕ್ಷಗಳು ಮುಂದಾಗುತ್ತಿಲ್ಲ. ನಾಡಿನ ಜ್ವಲಂತ ಸಮಸ್ಯೆ, ರೈತರ ಸಮಸ್ಯೆಗಳಿಗೆ ಧ್ವನಿಯಾಗಿರುವುದು ರೈತಸಂಘ. ಈ ನಿಟ್ಟಿನಲ್ಲಿ ರೈತಸಂಘವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿ ರೈತನ ಕರ್ತವ್ಯ. ಸಮಸ್ಯೆಗಳು ಎದುರಾದರೆ ಕೇವಲ ಪ್ರತಿಭಟನೆ ಮಾಡಿ ಸಮ್ಮನಾಗುವುದಲ್ಲ. ಪ್ರತಿ ಸದಸ್ಯನಿಗೆ ಸಮಸ್ಯೆಯನ್ನು ತಿಳಿಸುವ ಕೆಲಸವಾಗಬೇಕು. ರೈತರ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಪಹಣಿ ಇದ್ದವನ್ನಷ್ಟೇ ರೈತನಲ್ಲ, ಕೃಷಿ ಪೂರಕ ಚುಟುವಟಿಕೆಗಳಲ್ಲಿ ತೊಡಗಿರುವವನನ್ನೂ ಸಂಘದ ಸದಸ್ಯನ್ನಾಗಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಹಾಸನ ಜಿಲ್ಲಾಧ್ಯಕ್ಷ ರಘು ಹಿರಿಸಾವೆ, ಪದಾಧಿಕಾರಿಗಳಾದ ಇಮ್ರಾನ್ ಅಹಮ್ಮದ್, ಎಂ.ಎಲ್.ಹರೀಶ್, ವಿವಿಧ ತಾಲೂಕು ಅಧ್ಯಕ್ಷರಾದ ಎಸ್.ಎಸ್.ರಾಮಚಂದ್ರ, ರವಿಗೌಡಯ್ಯ, ಶಾಂತರಾಜ್ ಅರಸು, ಸೋಮೇಗೌಡ, ದಿನೇಶ್, ಶಿವಮೂರ್ತಿ ಇತರರು ಇದ್ದರು.