ಜಿಲ್ಲೆ

ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಕೊಳ್ಳೇಗಾಲ : ತಾಲೂಕಿನ ದಾಸನಪುರ ಸೇತುವೆ ಬಳಿ ಬೈಕ್‌ನಲ್ಲಿ 342ಗ್ರಾಂ ತೂಕದ ಒಣಗಿದ ಗೊಂಡೆ ಮಿಶ್ರಿತ ಗಾಂಜಾವನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಅಪರಾಧ ಪತ್ತೆ ದಳದ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮೇದಿನಿ ಗ್ರಾಮದ ಅಭಿ (22), ಶ್ರೀಕಾಂತ ನಾಯಕ (40) ಬಂಧಿತರು.

ಇವರು ಮೇದನಿ ಗ್ರಾಮದಿಂದ ಕೊಳ್ಳೇಗಾಲ ಕಡೆಗೆ ಗಾಂಜಾ ಸೊಪ್ಪನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಎಂ.ಧಮೇಂದ್ರ ಮಾರ್ಗ ದರ್ಶನದಂತೆ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ ನೇತೃತ್ವದಲ್ಲಿ ಡಿವೈಎಸ್ಪಿ ಅಪರಾಧ ಪತ್ತೆ ದಳದ ಪೊಲೀಸರು ದಾಸನಪುರ ಸೇತುವೆ ಬಳಿ ಕಾದಿದ್ದರು. ಈ ವೇಳೆ ಇಬ್ಬರು ಬೈಕಿನಲ್ಲಿ ಬರುವಾಗ ಅಡ್ಡಗಟ್ಟಿದ ಪೊಲೀಸರು ಪರಿಶೀಲಿಸಿದ್ದಾರೆ. ಬೈಕ್ ಪೆಟ್ರೋಲ್ ಟ್ಯಾಂಕ್ ಕವರ್‌ನಲ್ಲಿದ್ದ ಹಳದಿ ಬಣ್ಣದ ಬಟ್ಟೆ ಬ್ಯಾಗ್‌ನಲ್ಲಿ ಒಣಗಿದ ಗೊಂಡೆ ಮಿಶ್ರಿತ ಗಾಂಜಾ ಸೊಪ್ಪು ದೊರೆತಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಎಎಸ್‌ಐ ತಖೀವುಲ್ಲ, ಹೆಡ್‌ಕಾನ್‌ಸ್ಟೇಬಲ್ ರವಿ, ವೆಂಕಟೇಶ್, ಕಿಶೋರ್, ಶಿವಕುಮಾರ್, ಬಿಳಿಗೌಡ, ರಾಜೀವ್, ಸವಿರಾಜು ಇತರರಿದ್ದರು.