ಬೀದರ್: ಅಕ್ರಮವಾಗಿ ಗಾಂಜಾ ಸಾಗಿಸಿದ ಇಬ್ಬರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಡಲೂರು ಸತ್ಯನಾರಾಯಣಚಾರ್ಯ ಮಹತ್ವದ ತೀರ್ಪು ನೀಡಿದ್ದಾರೆ. ಔರಾದ್ ತಾಲೂಕಿನ ವಲ್ಲೇಪುರ ತಾಂಡಾದ ರಾಜು ರಾಮಣ್ಣ ಅಲಿಯಾಸ್ ಅಮನ್ ಆಡೆ, ದ್ರೌಪತಿ ದಿಗಂಬರ್ ರಾಠೋಡ್ ಶಿಕ್ಷೆಗೆ ಒಳಗಾದವರು. 2011ರ ಅಕ್ಟೋಬರ್ 3ರಂದು ನಡೆದ ಘಟನೆ ಇದಾಗಿದೆ. ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾಗ ಇವರಿಬ್ಬರು ಚಿಕ್ ಪೇಟ ಕ್ರಾಸ್ ಹತ್ತಿರ ಬೀದರ್ ನ್ಯೂಟೌನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಸಿಪಿಐ ಕಪಿಲ್ ದೇವ ಈ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಪರಾಧಿಗಳಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಬಸವಂತರೆಡ್ಡಿ ವಾದಿಸಿದ್ದರು.