ಶಿವಮೊಗ್ಗ: ಶಿವಮೊಗ್ಗದಲ್ಲಿ ಇನ್ನೆರಡು ತಿಂಗಳೊಳಗೆ ಗಾಂಜಾ ಮಾರಾಟ ಮಟ್ಟಹಾಕಬೇಕು ಹಾಗೂ ರೌಡಿಗಳನ್ನು ಸಂಪೂರ್ಣವಾಗಿ ನಿಗ್ರಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಎಸ್ಪಿಗೆ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಪೊಲೀಸರ ಸಹಕಾರವಿಲ್ಲದೆ ಈ ಪ್ರಮಾಣದಲ್ಲಿ ಗಾಂಜಾ ದಂಧೆ ಇರಲು ಸಾಧ್ಯವಿಲ್ಲ. ಇನ್ಮುಂದೆ ಯಾವುದೆ ಕಾರಣಕ್ಕೂ ಶಿವಮೊಗ್ಗದಲ್ಲಿ ಗಾಂಜಾ ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು.
ಕಾಲಮಿತಿಯೊಳಗೆ ಗಾಂಜಾ ನಿಯಂತ್ರಣಕ್ಕೆ ಬರಬೇಕು. ಪೊಲೀಸ್ ಇಲಾಖೆ ಒಳಗೆ ಗಾಂಜಾ ಮಾರಾಟಗಾರರ ಜತೆಗೆ ಶಾಮೀಲಾದವರು ಇದ್ದರೆ ಕೂಡಲೇ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೌಡಿಗಳು, ಪುಡಿ ರೌಡಿಗಳನ್ನು ಮಟ್ಟಹಾಕಬೇಕು. ವಾಹನಗಳಿಗೆ ಬೆಂಕಿ ಹಚ್ಚುವುದು, ಕೂಲಿ ಮಾಡುವವರ ಮನೆಗೆ ನುಗ್ಗಿ ದರೋಡೆ ಮಾಡುವ ಪ್ರಕರಣಗಳು ಸಂಭವಿಸಿವೆ. ಇಂಥವರ ವಿರುದ್ಧ ಬಿಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಕೂಲಿ ಕಾರ್ವಿುಕರ ಮನೆಗೆ ನುಗ್ಗಿ 9 ಸಾವಿರ ರೂ. ದರೋಡೆ ಮಾಡಲಾಗಿದೆ. ಕಾಶಿಪುರದಲ್ಲಿ 17 ಬೈಕ್ಗಳ ಬ್ಯಾಟರಿ ಕಳವು ಮಾಡಲಾಗಿದೆ. ಸೀಗೆಹಟ್ಟಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ತಡೆಯಲು ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಕೇಸ್ ಹಾಕಿ ನ್ಯಾಯಾಲಯಕ್ಕೆ ಕಳುಹಿಸುವುದು ಮಾತ್ರ ನಿಮ್ಮ ಕೆಲಸವಲ್ಲ. ಬದಲಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕೆ.ಎಂ.ಶಾಂತರಾಜು, ಗಡಿಪಾರು ಹಾಗೂ ಕಠಿಣ ಕ್ರಮ ತೆಗೆದುಕೊಂಡು ಇನ್ನೆರಡು ತಿಂಗಳಲ್ಲಿ ಗಾಂಜಾ ಮಾರಾಟವನ್ನು ಹಂತ ಹಂತವಾಗಿ ತಡೆಯಲಾಗುವುದೆಂದು ಭರವಸೆ ನೀಡಿದರು.
ಡಿಸಿ ಕೆ.ಬಿ.ಶಿವಕುಮಾರ್, ಎಎಸ್ಪಿ ಡಾ. ಎಚ್.ಟಿ.ಶೇಖರ್, ಡಿವೈಎಸ್ಪಿ ಉಮೇಶ್ ನಾಯ್್ಕ ಸಿಪಿಐಗಳಾದ ವಸಂತ್ಕುಮಾರ್, ಸಂಜೀವ್ಕುಮಾರ್ ಸೇರಿ ಹಿರಿಯ ಅಧಿಕಾರಿಗಳಿದ್ದರು.