ಹುಬ್ಬಳ್ಳಿ: ಇಲ್ಲಿನ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 3 ಕೆ.ಜಿ. 336 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಕೇಶ್ವಾಪುರ ಹೊಸ ಬದಾಮಿ ನಗರ ನಿವಾಸಿ ಶ್ರೀನಿವಾಸ ಗುರುದಾಸ ಬಾಬುರಾವ್ (26) ಹಾಗೂ ಶಬರಿ ನಗರದ ವಿನಾಯಕ ಜವಾಹರಲಾಲ್ ಮಗಜಿಕೊಂಡಿ (20) ಬಂಧಿತರು. ಅವರಿಂದ 1.66 ಲಕ್ಷ ರೂ. ಮೌಲ್ಯದ 3 ಕೆ.ಜಿ. 336 ಗ್ರಾಂ ಗಾಂಜಾ, 900 ರೂ. ನಗದು, 1 ಬೈಕ್, 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಇನ್ಸ್ಪೆಕ್ಟರ್ ರವಿಚಂದ್ರ ಡಿ.ಬಿ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ನೌಕರಿ ಕೊಡಿಸುವುದಾಗಿ ವಂಚನೆ
ಹುಬ್ಬಳ್ಳಿ: ಡೇಟಾ ಎಂಟ್ರಿ ನೌಕರಿ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬರಿಂದ 1,41,450 ರೂ. ಪಡೆದು ವಂಚಿಸಿರುವ ಕುರಿತು ಹು-ಧಾ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ನಗರದ ಯುವತಿಯೊಬ್ಬರು ಅ. 6ರಂದು ಆನ್ಲೈನ್ನಲ್ಲಿ ನೌಕರಿಗಾಗಿ ಹುಡುಕಾಟ ನಡೆಸಿದ್ದರು. ವೆಬ್ಸೈಟ್ವೊಂದರಲ್ಲಿ ಕೆಲಸಕ್ಕಾಗಿ ಮಾಹಿತಿ ನೀಡಿದ್ದರು. ಆಕೆಯ ಮೊಬೈಲ್ ನಂಬರ್ಗೆ ನಿಶಾ ಮತ್ತು ಶಾಂತಾ ಎಂಬುವರು ಕರೆ ಮಾಡಿ ಹುಬ್ಬಳ್ಳಿಯಲ್ಲಿ ಡೇಟಾ ಎಂಟ್ರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು.
ನಂತರ ಮೇಲ್ ಕಳುಹಿಸಿ ವಿವಿಧ ಶುಲ್ಕದ ನೆಪದಲ್ಲಿ ಐಡಿಬಿಐ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದರು. ಆ ಪ್ರಕಾರ ಯುವತಿ ಫೋನ್ ಪೇ ಮೂಲಕ ಹಂತ ಹಂತವಾಗಿ 1,41,450 ರೂ. ವರ್ಗಾಯಿಸಿದ್ದರು. ನಂತರವೂ ಹಣ ಕಳುಹಿಸುವಂತೆ ಒತ್ತಾಯಿಸಿದ ಬಳಿಕ ಅನುಮಾನಗೊಂಡ ಯುವತಿ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂಜಾಟವಾಡುತ್ತಿದ್ದ 9 ಜನರ ಬಂಧನ
ಧಾರವಾಡ: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 9 ಜನರನ್ನು ಬಂಧಿಸಿದ ಘಟನೆ ಅಮ್ಮಿನಭಾವಿ ರಸ್ತೆಯಲ್ಲಿನ ಪೀರಗಣಿ ದರ್ಗಾ ಬಳಿ ಮಂಗಳವಾರ ರಾತ್ರಿ ನಡೆದಿದೆ.ಜೂಜಾಟದಲ್ಲಿ ತೊಡಗಿದ್ದ ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ ಶಿವಾಜಿ ಈಶ್ವರ ಮದನಿ, ಉಸ್ಮಾನಗಣಿ ಮಹ್ಮದಹಾಸೀಂ ಶಿರಹಟ್ಟಿ, ಮಹಮ್ಮದಗೌಸ ಅಲ್ಲಾಭಕ್ಷ ಬೆಟಗೇರಿ, ಆಸೀಫ್ಶೇಖ ಮಹ್ಮದಸಾಬ ಶೇಖ, ಮೈನುದ್ದೀನ್ ಇಸ್ಮಾಯಿಲಸಾಬ ದೊಡವಾಡ, ಸಂತೋಷ ವಿರೂಪಾಕ್ಷಪ್ಪ ಧರ್ಮಂತನವರ, ಮುಕ್ತಿಯಾರ ಅಬ್ದುಲಖಾನ ತಂಬೋಲಿ, ಅಶೋಕ ಯಲ್ಲಪ ಬಾವಿ ಮತ್ತು ಕೃಷ್ಣಾ ನಿಂಗಪ್ಪ ತಿಗಡಿ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 7460 ರೂ.ನಗದು ಮತ್ತು ಜೂಜಾಟ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ದೌರ್ಜನ್ಯ, ಆರೋಪಿ ಅಂದರ್
ಧಾರವಾಡ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಇಲ್ಲಿನ ರಾಜೀವಗಾಂಧಿನಗರದಲ್ಲಿ ನಡೆದಿದ್ದು, ಆರೋಪಿಯನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನಿವಾಸಿ ಯಲ್ಲಪ್ಪ ಎಲಿಗಾರ (48) ಬಂಧಿತ ಆರೋಪಿ.ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ನೊಂದ ಮಹಿಳೆ ವಿದ್ಯಾಗಿರಿ ಠಾಣೆಯಲ್ಲಿ ಅ. 5ರಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿ ಯಲ್ಲಪ್ಪ ಎಲಿಗಾರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.