ಜಿಲ್ಲೆ

ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ

ಚಾಮರಾಜನಗರ: ಜಿಲ್ಲೆಯ ದಲಿತರ ಕಾಲೋನಿಗಳಲ್ಲಿ ಗಾಂಜಾ ಮತ್ತು ಅಕ್ರಮವಾಗಿ ಮದ್ಯಮಾರಾಟ ಮಾಡುವುದು ಹೆಚ್ಚಾಗುತ್ತಿದ್ದು, ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಪೊಲೀಸರು ಮುಂದಾಗಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮುಖಂಡರು ಮಾತನಾಡಿ, ಜಿಲ್ಲೆಯ ಹನೂರು ಮತ್ತು ಕೊಳ್ಳೇಗಾಲದ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುವುದು ಹಾಗೂ ಮಾರಾಟ ಮಾಡುವುದು ಹೆಚ್ಚಾಗುತ್ತಿದೆ. ಪೊಲೀಸರು ಹಲವಾರು ಪ್ರಕರಣಗಳನ್ನು ದಾಖಲು ಮಾಡುತ್ತಿದ್ದು, ಅದಾಗ್ಯೂ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಗಾಂಜಾ ಮಾರಾಟ ಮಾಡುವುದು ಮತ್ತು ಬೆಳೆಯುವುದನ್ನು ಮಟ್ಟ ಹಾಕಬೇಕು. ದಲಿತರ ಕಾಲೋನಿಗಳಲ್ಲಿ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಸವನಪುರ ಗ್ರಾಮದ ನಾಗರಾಜು ಮಾತನಾಡಿ, ಗ್ರಾಮದ ಸುಬ್ಬರಾವ್ ಎಂಬುವವರಿಂದ ತಮಿಳುನಾಡು ಮೂಲದ ವೇಲುಮಣಿ ಅವರು 1 ಎಕರೆ ಜಮೀನು ಖರೀದಿಸಿದ್ದಾರೆ. ಆದರೇ ಸುತ್ತಮುತ್ತಲಿನ ಸುಮಾರು 3 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಸಿದ್ದಯ್ಯನಪುರ ಗ್ರಾಮದ ಶಿವರಾಜ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಕಲ್ಪಿಸುವ ವೃತ್ತಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು, ಈ ಸ್ಥಳದಲ್ಲಿ ಹಲವಾರು ಅಪಘಾತಗಳು ಆಗುತ್ತಿದೆ. ಸಿದ್ದಯ್ಯನಪುರ, ಯಡಪುರ, ದೊಡ್ಡರಾಯಪೇಟೆ ಸಮೀಪ ಹಾದುಹೋಗಿರುವ ಹೆದ್ದಾರಿಗಳಲ್ಲಿ ಅಪಘಾತ ಆಗುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ಹೊನ್ನೂರು ಕೃಷ್ಣಮೂರ್ತಿ ಮಾತನಾಡಿ, ನಗರದ ಹಲವಾರು ರಸ್ತೆಗಳಲ್ಲಿ ಯುವಕರು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುವುದು ಹೆಚ್ಚಾಗುತ್ತಿದೆ. ಎಸ್ಸಿ, ಎಸ್ಟಿಗಳು ವಾಸಮಾಡುವ ಗ್ರಾಮಗಳ ವಾಣಿಜ್ಯ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಹೆಚ್ಚಾಗುತ್ತಿದೆ ಎಂದು ದೂರಿದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಸಮಾಜ ಕಲ್ಯಾಣ ಇಲಾಖೆ ನಂಜುಂಡೇಗೌಡ ಹಾಗೂ ಎಸ್ಸಿ, ಎಸ್ಟಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ದೌರ್ಜನ್ಯಗಳಿಗೆ ನ್ಯಾಯ ದೊರಕಿಸಿ:

ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಕಾಯ್ದೆಯಡಿ ಎಷ್ಟು ಪ್ರಕರಣಗಳು ದಾಖಲಾಗಿದೆ. ಎಷ್ಟು ಪ್ರಕರಣಗಳು ಅಂತ್ಯವಾಗಿದೆ ಮತ್ತು ಚಾಲ್ತಿಯಲ್ಲಿದೆ ಎಂಬ ಮಾಹಿತಿಯನ್ನು ನೀಡಬೇಕು. ಹನೂರಿನ ಸುಳ್ವಾಡಿ ಪ್ರಕರಣ ಆಗಿ 6 ವರ್ಷಗಳು ಕಳೆದಿದೆ. ಹಲವಾರು ಸಂತ್ರಸ್ತರು ಇಂದಿಗೂ ಆಸ್ಪತ್ರೆಗಳಿಗೆ ತಿರುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ಗುಂಡ್ಲುಪೇಟೆಯ ಕೊಲೆ ಪ್ರಕರಣ, ಎಸ್ಟಿ ಸಮುದಾಯದ ಹೆಣ್ಣು ಮಗುವಿನ ಕೊಲೆ ಪ್ರಕರಣ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆಯೇ ಎಂಬ ಮಾಹಿತಿ ನೀಡಬೇಕು. ಎಸ್,ಎಸ್ಟಿ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ರೀತಿಯಲ್ಲಿ ಪೊಲೀಸರು ಕ್ರಮವಹಿಸಬೇಕು. ದೌರ್ಜನ್ಯಗಳಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಮುಂದಾಗಬೇಕು ಎಂದು ದಸಂಸ ಮುಖಂಡ ದೊಡ್ಡಿಂದವಾಡಿ ಸಿದ್ದರಾಜು ಮನವಿ ಮಾಡಿದರು.

ದಲಿತರಿಂದಲೇ ದಲಿತರಿಗೆ ಬಹಿಷ್ಕಾರ:

ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ದಲಿತ ಸಮುದಾಯದಲ್ಲೇ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಯರಿಯೂರು ರವಿಕುಮಾರ್ ದೂರಿದರು. ನಮ್ಮ ಕುಟುಂಬಕ್ಕೆ ಗ್ರಾಮದಲ್ಲಿ ಸಾಮಾಜಿಕ ಬಹುಷ್ಕಾರ ಹಾಕಲಾಗಿದೆ. ಇನ್ನೂ ಹಲವಾರು ಕುಟುಂಬಗಳಿಗೂ ಬಹಿಷ್ಕಾರ ಹಾಕಿದ್ದು, ಕೆಲವು ಪ್ರಕರಣಗಳಲ್ಲಿ ದೂರು ದಾಖಲಾಗಿದೆ. ಕೆಲವರು ಗ್ರಾಮಸ್ಥರು ಮತ್ತು ಮಾನ-ಮರ್ಯಾದೆಗೆ ಅಂಜಿ ದೂರು ದಾಖಲಾಕಲು ಮಾಡುತ್ತಿಲ್ಲ. ಸಾಮಾಜಿಕ ಬಹಿಷ್ಕಾರದಿಂದ ದಲಿತ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಬಿ.ರಾಚಯ್ಯ ಪ್ರತಿಮೆ ನಿರ್ಮಾಣವಾಗಲಿ:

ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಪ್ರತಿಮೆ ನಿರ್ಮಾಣಕ್ಕೆ ಸುವರ್ಣಾವತಿ ಜಲಾಶಯದ ಸಮೀಪ ಗುದ್ದಲಿಪೂಜೆ ನೆರವೇರಿಸಿದ್ದು, ಆದಷ್ಟು ಬೇಗ ಪ್ರತಿಮೆ ನಿರ್ಮಾಣಕ್ಕೆ ಕ್ರಮವಹಿಸಬೇಕು. ಜಿಲ್ಲೆಯ ದೇವಸ್ಥಾನಗಳು, ಮಸೀದಿ, ಚರ್ಚ್‌ಗಳಲ್ಲೂ ಸಂವಿಧಾನ ಪೀಠಿಕೆಯನ್ನು ಅಳವಡಿಸಬೇಕು. ಸಮಾಜಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹವಾದವರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ವಿತರಣೆ ಮಾಡಬೇಕು. ಸರ್ಕಾರಿ ವಸತಿ ಗೃಹಗಳಲ್ಲಿ ಎಸ್ಟಿ, ಎಸ್ಟಿ ನೌಕರರಿಗೆ ಶೇ.28 ರಷ್ಟು ಮೀಸಲು ನೀಡಬೇಕು ಎಂದು ಮುಖಂಡ ಆಲೂರು ನಾಗೇಂದ್ರ ಒತ್ತಾಯಿಸಿದರು.

ಮತ್ತಷ್ಟು ಸಮಸ್ಯೆಗಳ ಅನಾವರಣ:

ಗುಂಡ್ಲುಪೇಟೆ ರಂಗಸ್ವಾಮಿ ಮಾತನಾಡಿ, ಬೇಗೂರಿನ ಬೆಲಚವಾಡಿ ಗ್ರಾಮದಲ್ಲಿ ದಲಿತರಿಗೆ ಸೇರಿದ ಬಾವಿಯನ್ನು ಕೆಡವಿ, ಮೇಲ್ವರ್ಗದವರು ಜಾಗವನ್ನು ಒತ್ತುವರಿಮಾಡಿಕೊಂಡಿದ್ದು ನ್ಯಾಯದೊರಕಿಸಿ ಕೊಡಬೇಕು ಎಂದರು. ಮುಖಂಡ ಅಂಬರೀಷ್ ಮಾತನಾಡಿ, ಯಳಂದೂರಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರವಾಸದ ಸಮಯದಲ್ಲಿ ಬಸ್ ಚಲಾಯಿಸಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳಬೇಕು. ಅಕ್ರಮ ಮಣ್ಣು ಸಾಕಾಣಿಕೆಗೆ ಸಹಕರಿಸುವ ಪೊಲೀಸರ ವಿರುದ್ಧ ಕ್ರಮವಹಿಸಬೇಕು ಎಂದರು. ಶ್ರೀವಿಶ್ವಗುರು ಮಲ್ಟಿಪರ್ಪಸ್ ಕೋ ಅಪರೇಟಿವ್ ಸೋಸೈಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಳಗಾವಿಯ 5 ಜನ ದಲಿತ ಅಮಾಯಕರ ಮೇಲೆ ದೂರು ದಾಖಲಾಗಿದ್ದು, ಈ ಕುರಿತು ಸೂಕ್ತ ಕ್ರಮವಹಿಸಬೇಕು ಎಂದು ವಕೀಲ ಕೃಷ್ಣ ಆಗ್ರಹಿಸಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ಮತ್ತು ಗಾಂಜಾ ಮಾರಾಟವನ್ನು ತಡೆಗಟ್ಟಲು ಶ್ರಮವಹಿಸಲಾಗುತ್ತಿದೆ. ಸುಳ್ವಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ನಾಶ ಮಾಡಲು ಯಾರೇ ಪ್ರಯತ್ನ ಮಾಡಿದರೂ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ.

-ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ

ಸುಳ್ವಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಸಾಕ್ಷಿಯನ್ನು ನಾಶ ಮಾಡಲು ಆಸೆ-ಆಮಿಷಗಳನ್ನು ಒಡ್ಡುತ್ತಿದ್ದಾರೆ. ಯಾರೋ ತಮಿಳುನಾಡು ಮೂಲದ ವ್ಯಕ್ತಿಯನ್ನು ಗುರಿಮಾಡಿ ಆತನ ವಿರುದ್ಧ ಸಾಕ್ಷಿ ಹೇಳುವಂತೆ ಪ್ರೇರೇಪಣೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

-ದೊಡ್ಡಿಂದವಾಡಿ ಸಿದ್ದರಾಜು, ಹೋರಾಟಗಾರ