ಕೊರಟಗೆರೆ: ಗಾಂಜಾ ಸೊಪ್ಪು ಮತ್ತು ಪಾಕೆಟ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರ ಜಿಲ್ಲೆಯ 4 ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬೈಲಾಂಜನೇಯ ದೇವಾಲಯದ ಸಮೀಪ ಶುಕ್ರವಾರ ಬಂಧಿಸಿದ್ದಾರೆ.
ಹುಬ್ಬಳ್ಳಿಯ ಚೇತನ್(28), ತುಮಕೂರು ತಾಲೂಕು ಊರುಕೆರೆಯ ಸಿಂಗರವೇಲು(29), ಪ್ರೀತಮ್(26), ಪಾವಗಡದ ನಾಗರಾಜ ಬಂಧಿತ ಆರೋಪಿ. ಕೊರಟಗೆರೆ ಪಟ್ಟಣದ ಬೈಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಹಗಲಿನಲ್ಲೇ ಗಾಂಜಾ ಸೊಪ್ಪು ಮತ್ತು ಪಾಕೆಟ್ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ತೂಕದ ಮಿಷನ್ ಹಾಗೂ 960 ಗ್ರಾಂ ಗಾಂಜಾ ಸೊಪ್ಪಿನ ಜತೆ 4 ಜನ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕಲಬುರಗಿಯ ಸಹಾಪುರದಿಂದ ಗಾಂಜಾಸೊಪ್ಪು ತಂದು ತುಮಕೂರು ಮತ್ತು ಕೊರಟಗೆರೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
5 ಗ್ರಾಂ ಪಾಕೆಟ್ಗೆ 500 ರೂ.: ದ್ವಿಚಕ್ರ ವಾಹನದಲ್ಲಿ ಬರುವ ಮಾರಾಟಗಾರರು ಜತೆಯಲ್ಲಿ ತೂಕದ ಮಿಷನ್ ಜತೆ ಗಾಂಜಾದ ಸೊಪು$್ಪ ತಂದು 5ಗ್ರಾಂ. ಗೆ 500ರೂ. ನಂತೆ ಸ್ಥಳದಲ್ಲಿಯೇ ನಗದು ಹಣ ಪಡೆದು ಪಾಕೆಟ್ ರೂಪದಲ್ಲಿ ಮಾರಾಟ ಮಾಡುತ್ತಿದ್ದರು. ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಚಂದ್ರಯ್ಯ ಭೇಟಿ ನೀಡಿ ಪರಿಶೀಲಿಸಿ ಮತ್ತೋರ್ವ ಆರೋಪಿಯ ವಶಕ್ಕೆ ಸೂಚಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.