ಜಿಲ್ಲೆ

ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ:10 ಪ್ರಕರಣಗಳಲ್ಲಿ 18 ಜನರನ್ನು ಬಂಧನ

ಹಾಸನ: ಜಿಲ್ಲೆಯಲ್ಲಿ ಗಾಂಜಾ ಘಮಲು ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದ್ದು, ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಅಕ್ರಮ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟದ 10 ಪ್ರಕರಣಗಳಲ್ಲಿ 18 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಅಕ್ರಮ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಪ್ರಕರಣಗಳಲ್ಲಿ 18 ಜನರನ್ನು ಬಂಧಿಸಿ, 3,46,800 ರೂ. ಮೌಲ್ಯದ 16.ಕೆ.ಜಿ 651.072 ಮಿಲಿ ಗ್ರಾಂ ಗಾಂಜಾ ಹಾಗು 2.27 ಗ್ರಾಂ ಎಂಡಿಎಂಎ (ಮೀಥೈಲೆನೆಡಿಯಾಕ್ಸಿ ಮೆಥಾಂಫೆಟಮೈನ್) ಮಾದಕ ವಸ್ತು ನಾಶಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡ್ರಗ್ ಡೆಸ್ರಾಯ್ ಕಮಿಟಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಬೆಂಗಳೂರಿನ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದ ವೈಜ್ಞಾನಿಕ ವಿಲೇವಾರಿ ಘಟಕದಲ್ಲಿ ಶುಕ್ರವಾರ ಗಾಂಜಾ ಮತ್ತು ಮಾದಕ ವಸ್ತುಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ
ಹಾಸನ ಗ್ರಾಮಾಂತರ ಠಾಣೆಯಲ್ಲಿ 2021ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸೀಕೆರೆ ತಾಲ್ಲೂಕು ಜೀಕನಹಳ್ಳಿ ಗ್ರಾಮದ ನಾಗರಾಜು, ಜೋಗನಹಳ್ಳಿಯ ಬಾಲಚಂದ್ರ, ಹಾಸನದ ಲಿಖಿತ್ ಎಂಬುವರನ್ನು ಬಂಧಿಸಿ 242 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಶಾಂತಿಗ್ರಾಮ ಠಾಣೆ ಪೊಲೀಸರು ವಿಜಯ ನಗರದ ಜಿಷಾನ್, ಕೆ.ಆರ್.ಪುರಂನ ಮೊಹಮ್ಮದ್ ಗೌಸ್ ಅವರಿಂದ 30 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದರು.
ಹಾಸನ ನಗರ ಠಾಣೆಯ ಪೊಲೀಸರು ರಾಘವೇಂದ್ರ ನಗರದ ನಹೀಮ್, ಹಳೇಬೀಡು ಹೋಬಳಿ ಬೂದಿಗುಂಡಿ ಗ್ರಾಮದ ಸಾದಿಕ್ ಷರೀಫ್ ಎಂಬುವವರನ್ನು ಬಂಧಿಸಿ 1.ಕೆ.ಜಿ. 165 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದರು. ಅರೇಹಳ್ಳಿ ಪೊಲೀಸ್ ಠಾಣಾ ಪೊಲೀಸರು ಮತ್ತಾವರ ಗ್ರಾಮದ ಲತೇಶ್, ಕುಮಾರಸ್ವಾಮಿ ಎಂಬುವವರಿಂದ 12 ಕೆ.ಜಿ. 290 ಗ್ರಾಂ ತೂಕದ ಗಾಂಜಾ ಸುಪರ್ದಿಗೆ ಪಡೆದಿದ್ದರು. ಹಾಸನ ಸಿಇಎನ್ ಠಾಣೆ ಪೊಲಿಸರು ಮೊಹಮ್ಮದ್ ಷಾನ್, ಸಲ್ಮಾನ್ ಜಾವಿದ್, ಆದಿ ಜಮೀರ್ ಎಂಬ ಆರೋಪಿಗಳಿಂದ 530 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಅದೇ ಠಾಣೆಯಿಂದ ಹಾಸನದ ಫಜ್ಲು ಅಹಮ್ಮದ್, ಪೆನ್ಷನ್ ಮೊಹಲ್ಲಾ ನಿವಾಸಿ ಇರ್ಫಾನ್ ಪಾಷಾ 510 ಗ್ರಾಂ ಗಾಂಜಾ ಮತ್ತು 2.27 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆದಿದ್ದರು. ಸಕಲೇಶಪುರ ತಾಲ್ಲೂಕು ಯಸಳೂರು ಠಾಣೆ ಪೊಲೀಸರು ಕಮಲುದ್ದೀನ್ ಎಂಬಾತನಿಂದ 1 ಕೆ.ಜಿ. 560 ಗ್ರಾಂ ತೂಕದ ಗಾಂಜಾ, ಅರಸೀಕೆರೆ ನಗರ ಠಾಣೆಯ ಪೊಲೀಸರು ನಗರದ ಅದ್ನಾನ್ ಎಂಬಾತನಿಂದ 64.72 ಮಿಲಿ ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದರು.
ಸಕಲೇಶಪುರ ಗ್ರಾಮಾಂತರ ಠಾಣೆಯ ಆರೋಪಿಗಳಾದ ಮಠಸಾಗರ ಗ್ರಾಮದ ನಿಶ್ವಂತ್, ಮಹೇಶ ಎಂಬುವವರಿಂದ 80 ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಿದ್ದರು. ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು 180 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.