ಬಾಬುರಾವ ಯಡ್ರಾಮಿ ಕಲಬುರಗಿ
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್, ಗಾಂಜಾದಂಥ ಮಾದಕ ವಸ್ತುಗಳ ಜಾಲ ಪತ್ತೆಯಾಗಿ ಭರ್ಜರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕಲಬುರಗಿ ಜಿಲ್ಲೆಯಲ್ಲೂ ಗಾಂಜಾ ಮಾಫಿಯಾ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಶಯ ಬಲಗೊಂಡಿದೆ. ತೆಲಂಗಾಣ ಗಡಿಗೆ ಹೊಂದಿಕೊಂಡ ಸಂಗಾಪುರದ ಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಗಾಂಜಾ ತೊಗರಿ ನಾಡಿನಲ್ಲಿ ಹೊಸದಲ್ಲ, ಅದರಲ್ಲೂ ಉತ್ತರ ಕನರ್ಾಟಕ ಬಹುತೇಕ ಕಡೆ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಸೋಮವಾರವಷ್ಟೆ ಚಿಂಚೋಳಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಗಾಂಜಾ ಬೆಳೆ ಪತ್ತೆ ಮಾಡಿದ ಪೊಲೀಸರಿಗೆ ಅಚ್ಚರಿ ಸಂಗತಿಗಳು ಲಭ್ಯವಾಗಿವೆ.
ಕಲಬುರಗಿ ಜಿಲ್ಲೆಯ ಗಾಂಜಾ ಗಮ್ಮತ್ತಿಗೆ ನೆರೆಯ ತೆಲಂಗಾಣ, ಮಹಾರಾಷ್ಟ್ರ ನಂಟಿದೆ. ಹಿಂದೆ ಬೀದರ್ ಜಿಲ್ಲೆಯಲ್ಲಿ ಅಫೀಮು ಮಾಫಿಯಾ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ ತಾಲೂಕುಗಳು ಮಹಾರಾಷ್ಟ್ರ, ಚಿಂಚೋಳಿ, ಸೇಡಂ ತಾಲೂಕುಗಳು ತೆಲಂಗಾಣ ಗಡಿಗೆ ಹೊಂದಿಕೊಂಡಿವೆ. ಈ ಗಡಿ ಗ್ರಾಮಗಳಲ್ಲಿ ಅಕ್ರಮವಾಗಿ ಬೆಳೆಯುವ ಗಾಂಜಾ ನೆರೆಯ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ ಎಂದು ಉನ್ನತ ಪೊಲೀಸ್ ಮೂಲಗಳು ವಿಜಯವಾಣಿಗೆ ತಿಳಿಸಿವೆ.
ನಗರ ಸೇರಿ ಎಲ್ಲೆಡೆ ಗಾಂಜಾ ಸೇದುವವರಿಗೆ ಅವರವರ ಚೈನ್ ಮೂಲಕ ಸರಳವಾಗಿ ಲಭ್ಯವಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಘಮಲು ಸ್ವಲ್ಪ ಜಾಸ್ತಿಯೇ ಇದೆ. ಕೆಲವರು ಮೋಜು ಮಸ್ತಿಗೆ ಗಾಂಜಾ ಸೇದಿದರೆ, ಮತ್ತೆ ಕೆಲವರು ಅದಕ್ಕೆ ದಾಸರಾಗಿದ್ದಾರೆ. ಅವರಿಗೆ ಗಾಂಜಾ ಹೊಡೆದರೆ ಮಾತ್ರ ಗಮ್ಮತ್ತು. ಹೀಗಾಗಿ ಜಿಲ್ಲಾದ್ಯಂತ ಗಾಂಜಾ ಜಾಲ ವಿಸ್ತರಿಸಿಕೊಂಡಿದೆ.
ಕೆಲದಿನ ಹಿಂದಷ್ಟೆ ಮಹಾತ್ಮ ಬಸವೇಶ್ವರ ನಗರ ಪೊಲೀಸರು ಇಬ್ಬರನ್ನು ಬಂಧಿಸಿ 500 ಗ್ರಾಂ ಗಾಂಜಾ ಚೀಟಿ (ಪೊಟ್ಟಣ)ಗಳನ್ನು ವಶಪಡಿಸಿಕೊಂಡಿದ್ದರು. ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ಹೊಲವೊಂದರಲ್ಲಿ ತೊಗರಿ ನಡುವೆ ಗಾಂಜಾ ಬೆಳೆದಿದ್ದು ಪತ್ತೆಯಾಗಿತ್ತು. ಇದೀಗ ಪೊಲೀಸರು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಸಂಗಾಪುರದಲ್ಲಿ 88 ಕೆಜಿ ಹಸಿ ಮತ್ತು ಒಣ ಗಾಂಜಾ ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. ಹೀಗೆ ನಿರಂತರ ದಾಳಿಯಲ್ಲಿ ಗಾಂಜಾ ದಂಧೆ ಪತ್ತೆಯಾಗುತ್ತಲೇ ಇರುವುದನ್ನು ಗಮನಿಸಿದರೆ ನೆರೆಯ ರಾಜ್ಯಗಳಲ್ಲಿ ಬೆಳೆದಿದ್ದು ರಾಜ್ಯಕ್ಕೆ ಬರುವುದರ ಜತೆಗೆ, ಜಿಲ್ಲೆಯಲ್ಲಿ ಕೆಲವರು ಕದ್ದುಮುಚ್ಚಿ ಬೆಳೆಯುವ ಗಾಂಜಾವನ್ನು ನೆರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ತಮ್ಮವರ ಮೂಲಕ ಜಿಲ್ಲೆಯ ಆಯ್ದ ಕೆಲ ಹಳ್ಳಿಗಳಿಗೂ ಸಪ್ಲೈನಡೆದಿರುವಂತಿದೆ. ಈ ಮೂಲಕ ಸೂರ್ಯನಗರಿ ಹೊಟ್ಟೆಗೂ ಬಂದು ಸೇರುತ್ತಿರುವಂತಿದೆ. ಸಂಗಾಪುರದಲ್ಲಿ ಗಾಂಜಾ ಗಿಡಗಳು ಪತ್ತೆಯಾದ ಬೆನ್ನಲ್ಲೇ ಪೊಲೀಸರು ಮೈಕೊಡವಿ ಎದ್ದಿದ್ದು, ಒಂದಿಷ್ಟು ಗಾಂಜಾ ಗಿರಾಕಿಗಳಿಗೆ ಹೊಸಕಿ ಹಾಕುವ ಸಾಧ್ಯತೆ ಇದೆ.
ಸಂಗಾಪುರದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬೆಳೆದಿದ್ದ 88 ಕೆಜಿ ಹಸಿ ಮತ್ತು ಒಣ ಗಾಂಜಾವನ್ನು ಚಿಂಚೋಳಿ ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ನೆರೆಯ ತೆಲಂಗಾಣಕ್ಕೆ ಸಾಗಿಸಲು ಬೆಳೆಯಲಾಗಿತ್ತು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಉಳಿದೆಡೆ ಹೆಚ್ಚಿನ ನಿಗಾ ಇರಿಸಲಾಗಿದೆ.
| ಡಾ.ಸಿಮಿ ಮರಿಯಮ್ ಜಾರ್ಜ
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಲಬುರಗಿ