ಜಿಲ್ಲೆ

ಗಾಂಜಾ ಕೇಸಲ್ಲಿ ಸಿಲುಕಿಸುವ, ಕೊಲೆ ಸಂಚು ಪ್ರಕರಣ, ಮೂವರ ಬಂಧನ

ಶಿವಮೊಗ್ಗ: ಮಂಗಳೂರಿನಿಂದ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಒಣ ಗಾಂಜಾ ಸಾಗಿಸುತ್ತಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಳೇ ವೈಷ್ಯಮ್ಯದಿಂದ ವ್ಯಕ್ತಿಯೊಬ್ಬನನ್ನು ಗಾಂಜಾ ಪ್ರಕರಣದಲ್ಲಿ ಖೆಡ್ಡಾಕ್ಕೆ ಬೀಳಿಸಲು ಮತ್ತು ಇನ್ನೊಬ್ಬನ ಕೊಲೆಗೆ ಸಂಚು ರೂಪಿಸಿದ್ದ ಘಟನೆ ಬೆಳಕಿಗೆ ಬಂದಿದ್ದು ಮೂವರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ವಿನೋಬನಗರದ ನಿಸಾರ್ ಅಲಿಯಾಸ್ ವಿಲ್ಸನ್ ಜೇಮ್ಸ್ (55), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಲೆಕ್ಸ್ ಅಲಿಯಾಸ್ ಅಲೆಕ್ಸಾಂಡರ್ (42) ಮತ್ತು ಕೊಲೆಗೆ ಸುಫಾರಿ ಪಡೆದಿದ್ದ ಬೆಂಗಳೂರು ಅಂಚೆಪಾಳ್ಯದ ಅಫ್ರೋಜ್ ಅಹಮ್ಮದ್ (37) ಬಂಧಿತರು.

ಕೇರಳದ ಅಜೀಲ್ (37)ನನ್ನು ಗಾಂಜಾ ಪ್ರಕರಣದಡಿ ಸಿಲುಕಿಸುವ ಯತ್ನ ಮತ್ತು ಸಜ್ಜು ಫ್ರಾನ್ಸಿಸ್ (40)ನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಅಜೀಲ್ ಮತ್ತ ಸಜ್ಜು ಫ್ರಾನ್ಸಿಸ್ ಕೇರಳದವರು. ಆರೋಪಿಗಳು ಹಲವು ವರ್ಷಗಳಿಂದ ಕೇರಳದ ಎಂಪರರ್ ಇಮ್ಯಾನುಯಲ್ ಚರ್ಚ್‌ಗೆ ಪ್ರಾರ್ಥನೆಗೆ ಹೋಗುತ್ತಿದ್ದರು. ಈ ವೇಳೆ ಅಜೀಲ್ ಮತ್ತು ಸಜ್ಜು ಫ್ರಾನ್ಸಿಸ್ ಮೇಲೆ ನಿಸಾರ್ ಮತ್ತು ಅಲೆಕ್ಸ್‌ಗೆ ದ್ವೇಷ ಬೆಳದಿತ್ತು. ಅಜಲ್ ಮತ್ತು ಸಜ್ಜುನನ್ನು ಮಟ್ಟಹಾಕಲು ನಾನಾ ಪ್ರಯತ್ನಗಳನ್ನು ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ.

ಚರ್ಚ್ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆಂಬ ಸುಳ್ಳು ಆರೋಪವನ್ನೂ ಅಜೀಲ್ ಮೇಲೆ ಹೋರಿಸಲು ಪ್ರಯತ್ನಿಸಿದ್ದರು. ಕೊನೆ ಅಜೀನ್‌ನನ್ನು ಶಿವಮೊಗ್ಗಕ್ಕೆ ಕರೆಸಿ ಗಾಂಜಾ ಕೇಸ್‌ನಡಿ ಸಿಲುಕಿಗೆ ಬಂಧಿಸುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಜು.17ರಂದು ಮಂಗಳೂರಿನಿಂದ ಖಾಸಗಿ ಬಸ್‌ನಲ್ಲಿ ಗಾಂಜಾವನ್ನಿಟ್ಟು ಪಾರ್ಸೆಲ್ ಕಳುಹಿಸಿದ್ದರು. ಆದರೆ ಅದೇ ದಿನ ಮಧ್ಯರಾತ್ರಿ 1.30 ಸುಮಾರಿಗೆ ತೀರ್ಥಹಳ್ಳಿ ಡಿವೈಎಸ್ಪಿ ವಿ.ಶಾಂತವೀರ ನೇತೃತ್ವದಲ್ಲಿ ಕೈಮರ ನಿಲ್ದಾಣದ ಬಳಿ ಖಾಸಗಿ ಬಸ್ ತಡೆದು ಪರಿಶೀಲನೆ ಮಾಡಿದಾಗ 2.300 ಕೆಜಿ ಒಣ ಗಾಂಜಾ ಇದ್ದ ಬ್ಯಾಗ್ ಸಿಕ್ಕಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನಿಸಾರ್ ಮತ್ತು ಅಲೆಕ್ಸ್ ಗಾಂಜಾ ಇಟ್ಟಿರುವುದು ಬೆಳಕಿಗೆ ಬಂದಿತ್ತು.

ವಿಚಾರಣೆ ಬಳಿಕ ಕೊಲೆ ಸಂಚು ಬಹಿರಂಗ: ತಕ್ಷಣವೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಜೀಲ್‌ನನ್ನು ಗಾಂಜಾ ಕೇಸ್‌ನಡಿ ಸಿಕ್ಕಿಸುವುದು ಮತ್ತು ಸಜ್ಜು ಫ್ರಾನ್ಸಿಸ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನ್ನು ಬಾಯ್ಬಿಟ್ಟರು. ಕಾರು ಅಪಘಾತದಲ್ಲಿ ಸಜ್ಜುನ ಕೊಲೆ ಮಾಡುವಂತೆ ಬೆಂಗಳೂರಿನ ಅಂಚೆ ಪಾಳ್ಯದ ಅಫ್ರೋಜ್‌ಗೆ 80 ಸಾವಿರ ರೂ.ಗೆ ಸುಪಾರಿಯನ್ನು ಕೊಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದು 80 ಸಾವಿರು ರೂ. ನಗದು ಮತ್ತು ಮೊಬೈಲ್ಗಳನ್ನು ವಶಕ್ಕೆ ಪಡೆದು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.