ಜಿಲ್ಲೆ

ಗವಿಮಠದ ಆವರಣದಲ್ಲಿ ಗಂಡನಿಂದಲೇ ಹೆಂಡತಿ ಕೊಲೆ

ಕೊಪ್ಪಳ: ನಗರದ ಗವಿಮಠದ ಆವರಣದಲ್ಲಿ ಪತಿಯೇ ಪತ್ನಿಗೆ ಚಾಕು ಇರಿದು ಭಾನುವಾರ ಕೊಲೆ ಮಾಡಿದ್ದಾನೆ.

ತುಮಕೂರು ಜಿಲ್ಲೆ ತುರವೇಕೇರೆ ಬಳಿಯ ಭುವನಹಳ್ಳಿಯ ಗೀತಾ (25) ಕೊಲೆಯಾದವರು. ಈಕೆಯ ಪತಿ ರಾಜೇಶ ಕೊಲೆ ಮಾಡಿದಾತ. ಮಠದ ಆವರಣದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿದ್ದು ಸಾಕಷ್ಟು ಜನ ಸೇರಿದ್ದರು. ಮದ್ಯ ವ್ಯಸನಿಯಾಗಿರುವ ರಾಜೇಶ ತನ್ನ ಪತ್ನಿ ಶೀಲ ಶಂಕಿಸಿ ಆಗಾಗ ಜಗಳ ತೆಗೆಯುತ್ತಿದ್ದ. ಅನೇಕ ಬಾರಿ ರಾಜಿ ಸಂಧಾನ ಮಾಡಲಾಗಿತ್ತು. ಇತ್ತೀಚೆಗೆ ದಂಪತಿ ಹೊಂದಿಕೊಂಡಿದ್ದರು. ಗವಿಮಠ ಜಾತ್ರೆಯಲ್ಲಿ ಪಾತ್ರೆ ಮಾರಾಟ ಅಂಗಡಿ ಹಾಕಿಕೊಳ್ಳಲು ಆಗಮಿಸಿದ್ದರು.ಶನಿವಾರ ಮತ್ತೊಮ್ಮೆ ಇಬ್ಬರ ನಡುವೆ ಜಗಳವಾಗಿದೆ. ಭಾನುವಾರ ಬೆಳಗ್ಗೆ ತಾನು ಊರಿಗೆ ಹೋಗುವುದಾಗಿ ಹೇಳಿದ ಗೀತಾ ರಾಜೇಶನನ್ನು ಬಿಟ್ಟು ಹೊರಟಿದ್ದರು. ಇದರಿಂದ ಕುಪಿತನಾದ ರಾಜೇಶ, ಗೀತಾ ಕತ್ತಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ತಕ್ಷಣ ನೆರೆದಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆಗೆ ಗೀತಾ ಕೊನೆಯುಸಿರೆಳೆದಿದ್ದಾರೆ.