ಚಿತ್ರದುರ್ಗ: ಪಂಚಾಕ್ಷರ ಮತ್ತು ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರಾಗಿದ್ದರು ಎಂದು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಗಾನಯೋಗಿ ಸಂಗೀತ ಬಳಗ ನಗರದ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಪಂಡಿತ ಪಂಚಾಕ್ಷರ ಗವಾಯಿಗಳ 80 ನೇ ಹಾಗೂ ಡಾ.ಪಂಡಿತ ಪುಟ್ಟರಾಜ ಗವಾಯಿಗಳ 14 ನೇ ಪುಣ್ಯಸ್ಮರಣೋತ್ಸವ ಮತ್ತು ಸಾಧಕರ ಸನ್ಮಾನ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂಗೀತ ಲೋಕದಲ್ಲಿ ಈ ಇಬ್ಬರು ಮಹನೀಯರು ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ದಿದ್ದಾರೆ. ಉತ್ತಮ ಗುರುವಿಗೆ ಒಳ್ಳೆಯ ಶಿಷ್ಯ ದೊರಕಿದರೆ ಅತ್ಯುತ್ತಮ ಸಾಧಕರಾಗಬಹುದೆಂಬುದಕ್ಕೆ ಗವಾಯಿಗಳು ಸಾಕ್ಷಿಯಾಗಿದ್ದಾರೆ ಎಂದು ಬಣ್ಣಿಸಿದರು.
ಹಾನಗಲ್ ಕುಮಾರಸ್ವಾಮಿ ಅವರಿಗೆ ಪಂಚಾಕ್ಷರ ಗವಾಯಿಗಳು ಶಿಷ್ಯರಾಗಿ, ಅವರಿಗೆ ಪುಟ್ಟರಾಜ ಗವಾಯಿಗಳು ಶಿಷ್ಯರಾಗಿ ದೊರಕಿದ್ದಾರೆ. ಈ ಇಬ್ಬರೂ ದಾರ್ಶನಿಕರು ಹಾನಗಲ್ ಕುಮಾರಸ್ವಾಮಿ ಅವರ ಮಾರ್ಗದರ್ಶನದ ಮೂಲಕ ನಡೆದಿದ್ದಾರೆ. ಇವರಿಂದಾಗಿ ಸಂಗೀತ ಕ್ಷೇತ್ರ ಪಾವನವಾಗಿದೆ. ಪುಟ್ಟರಾಜ ಗವಾಯಿಗಳ ಶಿಷ್ಯ ವೃಂದ ಚಿತ್ರದುರ್ಗದಲ್ಲಿದೆ ಎಂದರು.
ಕೇಂದ್ರ ಸರ್ಕಾರ ಪಂಚಾಕ್ಷರ ಗವಾಯಿಗಳನ್ನು ಗುರುತಿಸಲಿಲ್ಲ. ಆದರೆ, ಇವರ ಶಿಷ್ಯ ಪುಟ್ಟರಾಜ ಗವಾಯಿಗಳಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೌರವಿಸಿದೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ಕೊಡುಗೈ ದಾನಿಗಳ ಸಂಖ್ಯೆ ಹೆಚ್ಚಿದೆ. ಯಾವುದೇ ಕಾರ‌್ಯಕ್ರಮ ಏರ್ಪಡಿಸಿದರೂ ಅವರ ಸಹಕಾರ ಇದ್ದೇ ಇರುತ್ತದೆ. ಗಾನಯೋಗಿ ಸಂಗೀತ ಬಳಗಕ್ಕೆ ನಮ್ಮಿಂದಲೂ ಸಹಕಾರ ಸಿಗಲಿದೆ. ಚಿತ್ರದುರ್ಗದ ನೆಲ ಕಲೆ, ಕ್ರೀಡೆ, ಸಾಹಿತ್ಯಕ್ಕೆ ಹೆಸರಾಗಿದ್ದು, ಸೂಕ್ತ ಪ್ರೋತ್ಸಾಹ ಸಿಗಬೇಕಿದೆ. ಶ್ರೀ ಮಠದಲ್ಲಿ ಮುಂದೆ ಜರುಗುವ ಕಾರ‌್ಯಕ್ರಮಗಳ ಸಂದರ್ಭದಲ್ಲಿ ಗಾನಯೋಗಿ ಸಂಗೀತ ಬಳಗದ ಕಾರ‌್ಯಕ್ರಮ ಏರ್ಪಡಿಸಲಾಗುವುದು ಎಂದರು.
ಬಳಗದ ಅಧ್ಯಕ್ಷ ಎಂ.ತೋಟಪ್ಪ ಉತ್ತಂಗಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ, ಶಾರದಮ್ಮ ರುದ್ರಪ್ಪ, ಡಿ.ಎಸ್.ಸುರೇಶ್‌ಬಾಬು, ನಿವೃತ್ತ ಪ್ರಾಚಾರ‌್ಯ ಸಿ.ಎಂ.ಚಂದ್ರಪ್ಪ, ಬಳಗದ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿ, ಉಪಾಧ್ಯಕ್ಷ ಎಲ್.ಎಸ್.ಚಿನ್ಮಯಾನಂದ, ಕಾರ‌್ಯದರ್ಶಿ ನಂದೀಶ್, ಸುಮಾ ರಾಜಶೇಖರ್, ಪ್ರೇಮಾ ಬಾಲಚಂದ್ರಪ್ಪ, ನಳಿನಾ ಇದ್ದರು.
ಬಳಗದ ಕಲಾವಿದರು ಪ್ರಾರ್ಥಿಸಿದರು. ಉಮಾ ರಮೇಶ್ ಸ್ವಾಗತಿಸಿದರು, ನಿವೃತ್ತ ಉಪನ್ಯಾಸಕ ಜ್ಞಾನಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕಟ್ಟಿ ವಂದಿಸಿದರು. ರಶ್ಮಿ, ವಿದ್ಯಾ ಪ್ರತಾಪ್ ನಿರೂಪಿಸಿದರು.