ತುಮಕೂರು: 70 ವರ್ಷ ಗಳಿಸಿದ್ದನ್ನು ಕಳೆದುಕೊಳ್ಳುವ ಆತಂಕದಲ್ಲಿ ಪ್ರಸ್ತುತ ದೇಶವಿದ್ದು, ಪ್ರತಿನಿತ್ಯ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಕಳವಳ ವ್ಯಕ್ತಪಡಿಸಿದರು.
ನಗರದ ಬಾಲಭವನದಲ್ಲಿ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮುದಾಯದತ್ತ ಸಿನಿಮಾ ಬಯಲಾಟದ ಭೀಮಣ್ಣ ಚಿತ್ರಯಾತ್ರೆ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಭಾರತವನ್ನು ಒಗ್ಗೂಡಿಸುವ ಮೂಲಕ ದೇಶ ಕಟ್ಟಲು ಸಾಧ್ಯವಾಗಿದ್ದು ಸಂವಿಧಾನದಿಂದ, ದೇಶ ಹಾಗೂ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಇರುವುದೂ ಕೂಡ ಸಂವಿಧಾನಕ್ಕೆ ಮಾತ್ರ ಎಂದರು. ಸಿನಿಮಾಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬರಗೂರು ರಾಮಚಂದ್ರಪ್ಪ ಅವರ ಬಯಲಾಟದ ಭೀಮಣ್ಣ ಚಿತ್ರವಿದೆ ಎಂದರು.
ತಂತ್ರಜ್ಞಾನ ಹೆಚ್ಚಿದಂತೆ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ, ಅಂದು ಸಿನಿಮಾ ಮನರಂಜನೆಯೊಂದಿಗೆ ನೀತಿಪಾಠ ಹೇಳುತ್ತಿತ್ತು, ಆದರೆ ಇಂದು ಹಣ ಸಂಪಾದನೆಗೆ ಸೀಮಿತವಾಗಿವೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬೇಸರ ವ್ಯಕ್ತಪಡಿಸಿದರು.
ಬಯಲಾಟದ ಭೀಮಣ್ಣ ಚಿತ್ರವನ್ನು ಜನರಿಗೆ ತಲುಪಿಸುವ ಪ್ರಯೋಗಕ್ಕೆ ಪ್ರಾಯೋಜನೆ ನೀಡಲು ಮುಂದೆ ಬಂದವರು ಕೆ.ಎನ್.ರಾಜಣ್ಣ ಮಾತ್ರ. ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್‌ಗೆ ಮತ್ತೊಂದು ಆಯಾಮ ನೀಡಿದ್ದಾರೆ, ಬ್ಯಾಂಕ್ ಎಂದರೆ ಬರೀ ಆರ್ಥಿಕತೆ ಅಲ್ಲ, ಅದಕ್ಕೊಂದು ಸಾಂಸ್ಕೃತಿಕ ಆಯಾಮ ನೀಡಿದ್ದಾರೆ ಎಂದು ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.
ನಟ ಸುಂದರ್ ರಾಜ್, ನಟಿ ಪ್ರಮೀಳಾ ಜೋಷಾಯ್, ಹನುಮಂತೇಗೌಡ, ರಂಜಿತ್, ಶಿವಲಿಂಗಪ್ರಸಾದ್, ಸಂಕಲನಕಾರ ಸುರೇಶ್ ಅರಸ್, ಛಾಯಾಗ್ರಾಹಕ ನಾಗರಾಜ್ ಅದವಾನಿ, ಸಹನಿರ್ದೇಶಕ ನಟರಾಜ್ ಶಿವು, ಗೋಪಿ ಚಿತ್ರಯಾತ್ರೆ ಸಂಚಾಲಕ ಡಾ.ಓ.ನಾಗರಾಜು ಇದ್ದರು.
ಪ್ರಶಸ್ತಿಗೆ ಸೀಮಿತವಾಗಬೇಕೆ?: ರಾಜ್ಯದಲ್ಲಿ ಕಲಾತ್ಮಕ ಚಿತ್ರಗಳ ಬಿಡುಗಡೆಗೆ ತೊಂದರೆ ಎದುರಾಗುತ್ತಿದೆ, ಹೊಸ ಪ್ರಯೋಗಕ್ಕೆ ಸರಿಯಾದ ಭೂಮಿಕೆ ಇಲ್ಲದಂತಾಗಿದ್ದು, ಪ್ರಯೋಗಾತ್ಮಕ ಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಗಳ ಕಡೆ ಬರುತ್ತಿಲ್ಲ ಎಂದು ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಬೇಸರಿಸಿದರು. ಪ್ರಯೋಗಾತ್ಮಕ ಚಿತ್ರಗಳು ಪ್ರಶಸ್ತಿಗೆ ಸೀಮಿತವಾಗಬೇಕೆ? ಎಂದು ಪ್ರಶ್ನಿಸಿದ ಅವರು, ಚಿತ್ರಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಸಮುದಾಯದತ್ತ ಚಿತ್ರಯಾತ್ರೆ ಪ್ರಾರಂಭಿಸಿದ್ದು, ಈ ಪರ್ಯಾಯ ಪ್ರದರ್ಶನದ ಮೂಲಕ ಹೊಸ ಅಭಿರುಚಿಯ ಪ್ರೇಕ್ಷಕರನ್ನು ಸೃಷ್ಟಿಸುವ ಕೆಲಸ ಜರುಗಲಿದೆ ಎಂದರು.