ಬಾಗಲಕೋಟೆ: ಆರು ದಶಕಗಳ ಕಾಲ ಬಾಗಲಕೋಟೆ ಮತ್ತು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯ ನೀಡಿದ ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗವುದು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಶಾಲಾ ಯೋಜನೆಯಡಿ ೧.೨೦ ಕೋಟಿ ಮೊತ್ತದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗಲ್ಸ್ ಹೈಸ್ಕೂಲ್ ಎಂದೇ ಖ್ಯಾತಿ ಪಡೆದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಕಲಿತ ಲಕ್ಷಾಂತರ ಮಕ್ಕಳು, ಇಂದು ಸಮಾಜದ ವಿವಿಧ ಸ್ಥರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಬಾಗಲಕೋಟೆ ಮತ್ತು ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಶಾಲಾ ಕೊಠಡಿ ಅತ್ಯಂತ ಹಳೆಯದಾಗಿದ್ದರಿಂದ ದುರಸ್ಥಿ ಕಾರ್ಯ ಕೈಗೊಳ್ಳಬೇಕಿದೆ. ಇದಕ್ಕಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ತಕ್ಷಣವೇ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಶಾಲೆಯ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಶೀಘ್ರವೇ ಕಾಲೇಜು ಮತ್ತು ಪ್ರೌಢ ಶಾಲೆ ವಿಭಾಗದ ಶಾಲಾ ಸುಧಾರಣೆ ಸಮಿತಿ ಸಭೆ ನಡೆಸಿ, ಇಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಪಟ್ಟಿ ಮಾಡಬೇಕು. ಇದಕ್ಕಾಗಿ ಎಲ್ಲ ರೀತಿಯ ಸಹಾಕರ ನೀಡಲಾಗುವುದು ಎಂದರು.
ಶಿಕ್ಷಕರು, ಮಕ್ಕಳಿಗೆ ಕೇವಲ ಪಠ್ಯ ಬೋಧನೆ ಮಾಡದೇ, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗೂ ಒತ್ತು ನೀಡಬೇಕು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು, ಬದ್ಧತೆಯೊಂದಿಗೆ ಕೆಲಸ ಮಾಡುವ ಜತೆಗೆ ನಮ್ಮ ಈ ಶಾಲೆಯ ಮಕ್ಕಳು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಗಾಳಿ, ನಗರಸಭೆ ಸದಸ್ಯ ಹಾಜಿಸಾಬ ದಂಡಿನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್. ರಾಂಪುರ, ರಜಾಕ ಬೇನೂರ, ಮುಖಂಡರಾದ ಹೊಳಬಸು ಶೆಟ್ಟರ, ವೀರೇಶ ಹುಂಡೇಕಾರ, ಎನ್.ಜಿ. ಕೋಟಿ, ಪಿಆರ್‌ಇಡಿ ಎಇಇ ರೇವಡಿ, ಹನಮಂತ ಭಜಂತ್ರಿ, ಕಾಲೇಜಿನ ಪ್ರಾಚಾರ್ಯ ಪ್ರಕಾಶ ಜೇವೂರ, ಪ್ರೌಢ ಶಾಲೆ ವಿಭಾಗದ ಉಪ ಪ್ರಾಚಾರ್ಯೆ ಗಿರೀಜಾ ನಡುವಿನಮನಿ, ಶಿಕ್ಷಕರಾದ ಎಸ್.ಎಂ. ಮುತ್ತಗಿ, ಎಸ್.ಐ. ಕಂಠಿ ಮುಂತಾದವರು ಉಪಸ್ಥಿತರಿದ್ದರು.