ಕೊಡ್ಲಿಪೇಟೆ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಾವಿತ್ರವ್ವ, ನಂದೀಶ್, ಮಂಜುಳಾ, ಅನಿತಾ ಇತರರು ಇದ್ದರು. 
ಜಿಲ್ಲೆ

ಗರ್ಭಿಣಿಯರು, ಬಾಣಂತಿಯರು ಆರೋಗ್ಯ ಕಾಳಜಿ ವಹಿಸಲಿ

ಶನಿವಾರಸಂತೆ: ಗರ್ಭಿಣಿಯರು ಮತ್ತು ತಾಯಂದಿರು ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತೆ ಕಾಪಾಡಿಕೊಂಡರೆ ತಾಯಿ ಮತ್ತು ಶಿಶು ಮರಣ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕಿ (ಬಿಎಚ್‌ಒ) ಮಂಜುಳಾ ಅಭಿಪ್ರಾಯಪಟ್ಟರು.

ಕೊಡ್ಲಿಪೇಟೆ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ಸಪ್ತಾಹ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳ ಪಾಲಕರಿಗೆ ಮತ್ತು ಗರ್ಭಿಣಿಯರಿಗೆ ಮಾಹಿತಿ ನೀಡಿದರು.

ಗರ್ಭಿಣಿಯರು ಹತ್ತಿರದ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು. ಬಾಣಂತಿಯರು ಸಹ ತಮ್ಮ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ನಿಗಾ ವಹಿಸಿದರೆ ತಾಯಿ ಮತ್ತು ಶಿಶು ಮರಣ ಸಂಭವಿಸುವುದಿಲ್ಲ ಎಂದರು.

ಕೊಡ್ಲಿಪೇಟೆ ಅಂಗನವಾಡಿಯ ಬಾಲ ಸಮಿತಿ ಅಧ್ಯಕ್ಷೆ ಸಾಹಿತಿ ರುಮಾನಜಬೀರ್, ಸೋಮವಾರಪೇಟೆ ಅಂಗನವಾಡಿ ಮೇಲ್ವಿಚಾರಕಿ ಸಾವಿತ್ರವ್ವ ಮಾತನಾಡಿದರು. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್, ಆರೋಗ್ಯ ಇಲಾಖೆಯ ಅನಿತಾ, ಪೋಷಣ್ ಅಭಿಯಾನದ ಸಂಯೋಜಕ ರಂಜಿತ್ ಶೆಟ್ಟಿ, ಕೊಡ್ಲಿಪೇಟೆ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಗೌರಮ್ಮ, ಶಾಲಾಭಿವೃದ್ಧಿ ಸಮಿತಿ ಸದಸ್ಯ ವಸಂತ್, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಮುತ್ತಯ್ಯ, ಲಾವಣ್ಯ ಧರ್ಮಪ್ರಕಾಶ್, ಅಪ್ಸರಿ ಬೇಗಂ, ಆಶಾ ಕಾರ್ಯಕರ್ತೆ ಹೊನ್ನಮ್ಮ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.